ಆಂಧ್ರಪ್ರದೇಶ: ತಿರುಮಲದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಚಿರತೆ ದಾಳಿಯಿಂದ 6 ವರ್ಷದ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಬಾಲಕಿಯ ದೇಹದ ಅರ್ಧ ಭಾಗವನ್ನು ಚಿರತೆ ತಿಂದು ಹಾಕಿದ್ದು, ಕುಟುಂಬಸ್ಥರಲ್ಲಿ ದುಃಖ ಮನೆ ಮಾಡಿದೆ.
ಮಾಹಿತಿ ಪ್ರಕಾರ, ನೆಲ್ಲೂರು ಜಿಲ್ಲೆಯ ಪೋತಿರೆಡುಪದವು ಎಂಬಲ್ಲಿನ ಕುಟುಂಬವೊಂದು ದೇವರ ದರ್ಶನ ಪಡೆಯಲು ತಿರುಮಲಕ್ಕೆ ತೆರಳಿತ್ತು. ಶುಕ್ರವಾರ ರಾತ್ರಿ 8 ಗಂಟೆಗೆ ತಿರುಪತಿ ತಲುಪಿ ಬಳಿಕ ಅಲಿಪಿರಿ ಕಾಲುದಾರಿ ಮೂಲಕ ರಾತ್ರಿ 11 ಗಂಟೆ ವೇಳೆಗೆ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಕಾಲ್ನಡಿಗೆ ಮೂಲಕ ಬೆಟ್ಟ ಹತ್ತಿ ಹೋಗುತ್ತಿದ್ದ ಕುಟುಂಬಸ್ಥರ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ, ಮುಂದೆ ನಡೆದುಕೊಂಡು ಹೋಗುತ್ತಿದ್ದ 6 ವರ್ಷದ ಲಕ್ಷಿತಾ ಎಂಬ ಬಾಲಕಿಯ ಮೇಲೆ ದಾಳಿ ನಡೆಸಿ, ಕಾಡಿಗೆ ಎಳೆದೊಯ್ದಿದೆ. ಇನ್ನೇನು ಕೆಲವೇ ತಾಸಿನಲ್ಲಿ ಕುಟುಂಬಸ್ಥರು ಬೆಟ್ಟದ ತುದಿ ತಲುಪಬೇಕು ಎನ್ನುವಷ್ಟರಲ್ಲಿ ಈ ಘಟನೆ ನಡೆದಿದೆ.
ಚಿರತೆ ದಾಳಿಗೆ ಹೆದರಿದ ಕುಟುಂಬಸ್ಥರು ಜೋರಾಗಿ ಕಿರುಚಿಕೊಂಡಿದ್ದಾರೆ. ಚಿರತೆ ಮಗುವನ್ನು ಕಾಡಿಗೆ ಎಳೆದೊಯ್ದ ಬಳಿಕ ಪೋಷಕರು ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ಭದ್ರತಾ ಸಿಬ್ಬಂದಿ ಶೋಧ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಪೊಲೀಸರು ಶೋಧ ನಡೆಸಿದಾಗ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಮಗುವಿನ ಶವ ಪತ್ತೆಯಾಗಿದೆ. ಚಿರತೆ ಮಗುವಿನ ದೇಹದ ಅರ್ಧ ಭಾಗವನ್ನು ತಿಂದು ಹಾಕಿದ್ದು, ಭಕ್ತರು ಆತಂಕಗೊಂಡಿದ್ದಾರೆ.