ಆಗ್ರಾ ( ಉತ್ತರ ಪ್ರದೇಶ) :ನಗರದ ಕಮಲಾ ನಗರ ಪ್ರದೇಶದ ಮಣಪ್ಪುರಂ ಗೋಲ್ಡ್ ಲೋನ್ ಶಾಖೆಯಲ್ಲಿ ಶನಿವಾರ ನಡೆದ ಈ ವರ್ಷದ ಅತೀ ದೊಡ್ಡ ದರೋಡೆ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಕೇವಲ ಮೂರು ಗಂಟೆಯಲ್ಲಿ ಇಬ್ಬರು ದರೋಡೆಕೋರರನ್ನು ಎನ್ಕೌಂಟರ್ ಮಾಡಲಾಗಿದೆ.
ಶನಿವಾರ ಮಣಪ್ಪುರಂ ಗೋಲ್ಡ್ ಲೋನ್ ಶಾಖೆಗೆ ಶಸ್ತ್ರಾಗಳೊಂದಿಗೆ ನುಗ್ಗಿದ ಫಿರೋಝಾಬಾದ್ ಗ್ಯಾಂಗ್, ಬರೋಬ್ಬರಿ17 ಕೆ.ಜಿ ಚಿನ್ನ ಮತ್ತು 5 ಲಕ್ಷ ರೂಪಾಯಿಗೂ ಹೆಚ್ಚು ನಗದು ದೋಚಿ ಪರಾರಿಯಾಗಿತ್ತು. ಖದೀಮರು 20 ದಿನಗಳಿಂದ ಮಣಪ್ಪುರಂ ಶಾಖೆ ಮೇಲೆ ಕಣ್ಣಿಟ್ಟು ದರೋಡೆಗೆ ಸಂಚು ರೂಪಿಸಿದ್ದರು ಎಂದು ಆಗ್ರಾ ಎಎಸ್ಪಿ ಮುನಿರಾಜ್ ತಿಳಿಸಿದ್ದಾರೆ.
ಆಗ್ರಾ ಎಎಸ್ಪಿ ಮುನಿರಾಜು ಪ್ರಕರಣದ ಬಗ್ಗೆ ಮಾಹಿತಿ ನೀಡಿದರು ಮಣಪ್ಪುರಂ ಗೋಲ್ಡ್ ಲೋನ್ ಶಾಖೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಕಚೇರಿ ಸಿಬ್ಬಂದಿಗೆ ಗನ್ ತೋರಿಸಿ ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿದ್ದರು. ಬಳಿಕ ಯಾವುದೇ ಭಯವಿಲ್ಲದೇ ಆರಾಮಾಗಿ ನಡೆದುಕೊಂಡೇ ಅಲ್ಲಿಂದ ತೆರಳಿದ್ದರು.
ಆರೋಪಗಳ ಪತ್ತೆ ಸವಾಲು :ಹಾಡಹಗಲೇ ಜನ ನಿಬಿಡ ಪ್ರದೇಶದಲ್ಲಿ ನಡೆದ ದೊಡ್ಡ ಮಟ್ಟದ ದರೋಡೆ ಪ್ರಕರಣವನ್ನು ಭೇಧಿಸುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ, ಖದೀಮರು ಕದ್ದೊಯ್ದ ಚಿನ್ನದ ಪ್ಯಾಕೇಟ್ಗಳಲ್ಲಿ ಜಿಪಿಎಸ್ ಚಿಪ್ ಅಳವಡಿಸಿದ್ದರಿಂದ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚುವಲ್ಲಿ ಎಸ್ಪಿ (ನಗರ) ರೋಹನ್ ಪಿ ಬೊಟ್ರೆ ಮತ್ತು ತಂಡ ಯಶಸ್ವಿಯಾಗಿದೆ.
ಓದಿ : ಈ ಗೋಲ್ಡ್ ಲೋನ್ ಬ್ರಾಂಚ್ನಲ್ಲಿ ಬರೋಬ್ಬರಿ 17 ಕೆಜಿ ಚಿನ್ನ ಲೂಟಿ: 5 ಲಕ್ಷ ನಗದು ದರೋಡೆ
ಎಡಿಜಿ ಜಾನ್ ರಾಜೀವ್ ಕೃಷ್ಣ ಮತ್ತು ಐಜಿ ನವೀನ್ ಅರೋರಾ ಇಡೀ ಪ್ರಕರಣದ ಮೇಲೆ ಕಣ್ಣಿಟ್ಟಿದ್ದರು. ಎಸ್‌ಎಸ್ಪಿ ಮುನಿರಾಜ್ ತಕ್ಷಣ ಪೊಲೀಸರ ತಂಡ ರಚಿಸಿ ತನಿಖೆ ಪ್ರಾರಂಭಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯಕ್ಕೆ ಇಳಿದರು. ಈ ವೇಳೆ ಖದೀಮರು ದರೋಡೆ ನಡೆದ ಸ್ಥಳದಿಂದ 17 ಕಿ.ಮೀ ದೂರ ಎಟ್ಮಾಡ್ಪುರ ಪಟ್ಟಣದ ಬಳಿ ಇರುವ ವಿಷಯ ತಿಳಿದು ಪೊಲೀಸರು ಅಲ್ಲಿಗೆ ತೆರಳಿದರು. ಈ ವೇಳೆ ಆರೋಪಿಗಳು ಬೈಕ್ ಮೂಲಕ ಫಿರೋಝಾಬಾದ್ಗೆ ಎಸ್ಕೇಪ್ ಆಗಲು ಪ್ರಯತ್ನಿಸಿದರು.
ಎಸ್ಪಿ ಮತ್ತು ಇನ್ಸ್ಪೆಕ್ಟರ್ ಮೇಲೆ ಗುಂಡಿನ ದಾಳಿ :
ಪೊಲೀಸರನ್ನು ನೋಡಿದ ಇಬ್ಬರು ಖದೀಮರರಾದ ಮನೀಶ್ ಪಾಂಡೆ ಮತ್ತು ನಿರ್ದೋಷ್ ಕುಮಾರ್ ಎಂಬವರು ನಗರ ಎಸ್ಪಿ ರೋಹನ್ ಪಿ ಬೊಟ್ರೆ ಮತ್ತು ಇನ್ಸ್ಪೆಕ್ಟರ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದರು. ಈ ವೇಳೆ ಪ್ರತಿದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಎನ್ಕೌಂಟರ್ ಮಾಡಿದ್ದಾರೆ. ಹತ್ಯೆಯಾದ ಆರೋಪಿಗಳಿಂದ ಏಳು ಕೆ.ಜಿ ಚಿನ್ನ, ಪಿಸ್ತೂಲ್, ಕಾಟ್ರೆಜೆಗಳು, ಬಟ್ಟೆ ಮತ್ತು 1,62,000 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಸ್ಥಳಕ್ಕೆ ಮಣಪ್ಪುರಂ ಗೋಲ್ಡ್ ಲೋನ್ ಶಾಖೆಯ ವ್ಯವಸ್ಥಾಪಕ ವಿಜಯ್ ನರ್ವಾಲಿಯಾ ಅವರನ್ನು ಕರೆಸಿಕೊಂಡ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲಿಸಿದ್ದಾರೆ. ಇಬ್ಬರು ಪೊಲೀಸರ ಗುಂಡಿನ ದಾಳಿಯಿಂದ ಇನ್ನುಳಿದ ಮೂವರು ಆರೋಪಿಗಳಾದ ಅನ್ಶು, ನರೇಂದ್ರ ಮತ್ತು ಇನ್ನೋರ್ವ ತಪ್ಪಿಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.