ರಂಗಾರೆಡ್ಡಿ:ಬೆಳ್ಳಂಬೆಳಗ್ಗೆ ವಿಜಯಪುರ-ಹೈದರಾಬಾದ್ ಹೆದ್ದಾರಿಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಓವರ್ಟೇಕ್ ಭರದಲ್ಲಿ ಎದುರಿಗೆ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸೇರಿ ಏಳು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಚೇವೆಳ್ಳ ತಾಲೂಕಿನ ಮಲ್ಕಾಪೂರ್ ಗೇಟ್ ಬಳಿ ನಡೆದಿದೆ.
ಬೆಳ್ಳಂಬೆಳಗ್ಗೆ ವಿಜಯಪುರ-ಹೈದರಾಬಾದ್ ಹೆದ್ದಾರಿಯಲ್ಲಿ ಜವರಾಯನ ಅಟ್ಟಹಾಸ: ಏಳು ಮಂದಿ ದುರ್ಮರಣ
09:05 December 02
ಓವರ್ಟೇಕ್ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಬೋರ್ವೆಲ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕ ಸೇರಿ ಏಳು ಜನ ಸಾವನ್ನಪ್ಪಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕಾರ್ಯ ನಿಮಿತ್ತವಾಗಿ ಸಿಕಂದರಾಬಾದ್ ನಿವಾಸಿ ಅಸಿಫ್ಖಾನ್ ಸೇರಿದಂತೆ ಅವರ ಕುಟುಂಬದ 11 ಸದಸ್ಯರು ಕಾರಿನಲ್ಲಿ ಕರ್ನಾಟಕದ ಯಾದಗಿರಿ ಜಿಲ್ಲೆಯ ಗುರುಮಿಠ್ಕಲ್ಗೆ ಪ್ರಯಾಣ ಬೆಳೆಸಿದ್ದರು. ಚೇವಳ್ಳದ ಮಲ್ಕಾಪೂರ್ ಗೇಟ್ ಬಳಿ ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕಿಲು ಹೋಗಿ ಎದುರಿಗೆ ಬರುತ್ತಿದ್ದ ಬೋರ್ವೆಲ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಆರು ವರ್ಷದ ಬಾಲಕ ಸೇರಿ 6 ಜನ ಮೃತಪಟ್ಟಿದ್ದರು.
ಅಪಘಾತದ ದೃಶ್ಯ ನೋಡಿದ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮತ್ತು ಆಂಬ್ಯುಲೆನ್ಸ್ಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಐದು ಜನ ಗಾಯಾಳುಗಳ ಪೈಕಿ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಅಸಿಫ್ಖಾನ್ (50), ನಜಿಯಾ ಬೇಗಂ (45), ನಜಿಯಾ ಭಾನು (36), ಹರ್ಷ್ (28), ಸಾನಿಯಾ (18) ಮತ್ತು ಆರು ವರ್ಷದ ಬಾಲಕ ಹರ್ಷಾ ಭಾನು ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖಲೀದ್ (43) ಚಿಕತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.