ಲಖಿಂಪುರ ಖೇರಿ (ಯುಪಿ): ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಶನಿವಾರ ರಾತ್ರಿ ವೇಗವಾಗಿ ಬಂದ ಟ್ರಕ್ ನಿಂತಿದ್ದ ಜನರ ಮೇಲೆ ಹರಿದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
6 ಮಂದಿ ದುರ್ಮರಣ:ಖೇರಿ-ಭರೈಚ್ ಹೆದ್ದಾರಿಯ ಪಾಂಗಿ ಗ್ರಾಮದ ಬಳಿ ಕಾರು-ಸ್ಕೂಟಿ ಅಪಘಾತ ಸಂಭವಿಸಿತ್ತು. ಹೀಗಾಗಿ ರಸ್ತೆ ಬದಿಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಘಟನೆ ನಡೆದಿದೆ. ಮೃತರನ್ನು ರಿಜ್ವಾನ್ (20), ಕರಣ್ (14), ಪರಾಸ್ ನಿಶಾದ್ (84), ಕರುಣೇಶ್ ವರ್ಮಾ (30), ವೀರೇಂದ್ರ ವರ್ಮಾ ಮತ್ತು ಜಂಗ್ ಬಹದ್ದೂರ್ (17) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಲಖಿಂಪುರ ಖೇರಿಯ ಪಾಂಗಿ ಖುರ್ದ್ ಗ್ರಾಮದ ನಿವಾಸಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಮಾಹಿತಿ: ಪೊಲೀಸ್ ವರಿಷ್ಠಾಧಿಕಾರಿ ಗಣೇಶ್ ಪ್ರಸಾದ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಗಣೇಶ್ ಪ್ರಸಾದ್, "ರಾಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಿ ಗ್ರಾಮದ ರಸ್ತೆಯಲ್ಲಿ ಕಾರು ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟಿ ಸವಾರ ಗಾಯಗೊಂಡಿದ್ದ. ಇದನ್ನು ನೋಡಲು ಕೆಲವರು ರಸ್ತೆಯಲ್ಲಿ ಜಮಾಯಿಸಿದರು. ಇದೇ ವೇಳೆ ವೇಗವಾಗಿ ಬಂದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಜನರ ಮೇಲೆ ಹರಿದಿದೆ. ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ" ಎಂದು ಮಾಹಿತಿ ನೀಡಿದರು.