ನವದೆಹಲಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ರೋಹಿಂಗ್ಯಾ ಮುಸ್ಲಿಮರಿಗೆ ಭಾರತವನ್ನು ಪ್ರವೇಶಿಸಲು ಸಹಾಯ ಮಾಡುತ್ತಿದ್ದ ಮಾನವ ಕಳ್ಳಸಾಗಣೆ ಜಾಲವನ್ನು ಬೇಧಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಆರು ಮಂದಿಯನ್ನು ಬಂಧಿಸಿದ್ದಾರೆ.
ಅಸ್ಸೋಂ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ದೇಶದ ಇತರ ಭಾಗಗಳ ಗಡಿ ಪ್ರದೇಶಗಳಲ್ಲಿ ಮಾನವ ಕಳ್ಳಸಾಗಣೆ ಜಾಲ ಸಕ್ರಿಯವಾಗಿದ್ದು, ಕಾರ್ಯಾಚರಣೆ ನಡೆಸುತ್ತಿತ್ತು. ಈ ಕುರಿತಂತೆ ಎನ್ಐಎ ಅಧಿಕಾರಿಗಳು ಕರ್ನಾಟಕ, ಅಸ್ಸೋಂ, ಮೇಘಾಲಯದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕುಂಕುಮ್ ಅಹ್ಮದ್ ಚೌಧರಿ ಅಲಿಯಾಸ್ ಕೆಕೆ ಅಹಮದ್ ಚೌಧರಿ ಅಲಿಯಾಸ್ ಅಸಿಕುಲ್ ಅಹ್ಮದ್ ಎಂಬಾತ ಈ ಗುಂಪಿನ ನಾಯಕನಾಗಿದ್ದು, ಈತನ ಜೊತೆಗೆ ಸಹಲಂ ಲಸ್ಕರ್, ಅಹಿಯಾ ಅಹ್ಮದ್ ಬಾಪನ್ ಅಹ್ಮದ್ ಚೌಧರಿ ಮತ್ತು ಜಮಾಲುದ್ದೀನ್ ಅಹ್ಮದ್ ಚೌಧರಿ ಎಂಬುವರನ್ನು ಬಂಧಿಸಲಾಗಿದೆ.