ನವದೆಹಲಿ: 5ಜಿ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನವಾದ ನಿನ್ನೆ ನಿರೀಕ್ಷೆಗಿಂತ ಹೆಚ್ಚು ಅಂದರೆ 1.45 ಲಕ್ಷ ಕೋಟಿ ರೂಪಾಯಿಗಳ ಬಿಡ್ಡಿಂಗ್ ನಡೆದಿದ್ದು, 5ನೇ ಸುತ್ತಿನೊಂದಿಗೆ ಎರಡನೇ ದಿನದ ಹರಾಜು ಮುಂದುವರೆದಿದೆ. ಮುಕೇಶ್ ಅಂಬಾನಿ, ಸುನೀಲ ಮಿತ್ತಲ್ ಮತ್ತು ಗೌತಮ್ ಅದಾನಿ ಅವರ ಒಡೆತನದ ಕಂಪನಿಗಳು ಸೇರಿದಂತೆ ವೋಡಾಫೋನ್ ಐಡಿಯಾ ಹರಾಜು ಕಣದಲ್ಲಿವೆ.
ಆರಂಭಿಕ ದಿನವಾದ ಮಂಗಳವಾರದಂದು ನಾಲ್ಕನೇ ಸುತ್ತಿನ ಕೊನೆಯಲ್ಲಿ 1.45 ಲಕ್ಷ ಕೋಟಿ ರೂಪಾಯಿ ಮೊತ್ತದ ದೃಢೀಕೃತ ಬಿಡ್‌ಗಳು ಬಂದಿವೆ. ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಅತ್ಯಂತ ತುರುಸಿನಿಂದ ಬಿಡ್ ಮಾಡುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಹರಾಜಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲವಾದರೂ, 700 ಮೆಗಾಹರ್ಟ್ಸ್ ಬ್ಯಾಂಡಿನ 10 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಗಾಗಿ ರಿಲಯನ್ಸ್ ಜಿಯೋ 80,100 ಕೋಟಿ ರೂಪಾಯಿ ಮೌಲ್ಯದ ಬಿಡ್ ಮಾಡುವ ಸಾಧ್ಯತೆಯಿದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್ ವಿಶ್ಲೇಷಕರು ಹೇಳಿದ್ದಾರೆ.