ನಾಗ್ಪುರ (ಮಹಾರಾಷ್ಟ್ರ) : ನಗರದಲ್ಲಿ ಉದ್ಯಮಿಯೊಬ್ಬರು ಆನ್ ಲೈನ್ ಗೇಮ್ ಜಾಲದಲ್ಲಿ ಸಿಲುಕಿ ಬರೋಬ್ಬರಿ 58 ಕೋಟಿ ರೂ. ಕಳೆದುಕೊಂಡ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿ ಮಾಸ್ಟರ್ಮೈಂಡ್ ಬುಕ್ಕಿ ಅನಂತ್ನ ನಿವಾಸದಲ್ಲಿನ ಲಾಕರ್ನಿಂದ ಪೊಲೀಸರು 31 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಇದರಲ್ಲಿ 16,59,00,000 ನಗದು, 12 ಕೆಜಿ ಚಿನ್ನದ ಬಿಸ್ಕತ್ ಹಾಗೂ 294 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. ಬಳಿಕ ನಾಲ್ಕೂವರೆ ಕೋಟಿ ಮೌಲ್ಯದ ಚಿನ್ನಾಭರಣ, ಹಾಗೂ 4 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
2023 ಜುಲೈ 21 ರಂದು, ವಂಚನೆಗೆ ಒಳಗಾದ ಉದ್ಯಮಿ ತಾನು ಆನ್ಲೈನ್ ಗೇಮ್ ಮೂಲಕ ಹಣ ಕಳೆದುಕೊಂಡಿರುವ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ನಾಗ್ಪುರ ಪೊಲೀಸರ ತಂಡ ಗೋಂಡಿಯಾದಲ್ಲಿ ನೆಲೆಸಿದ್ದ ಆರೋಪಿಯ ಮನೆ ಮೇಲೆ ದಾಳಿ ನಡೆಸಿತ್ತು. ದಾಳಿಯ ಮೊದಲ ದಿನ ಮನೆಯಿಂದ 4 ಕೆಜಿ ಚಿನ್ನ ಹಾಗೂ 10 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಆನ್ಲೈನ್ ಗೇಮಿಂಗ್ ನೆಟ್ವರ್ಕ್ ಬೆಳೆಸಿದ್ದ ಆರೋಪಿ:ಅನಂತ್ ಅಲಿಯಾಸ್ ಸೋಂಟು ಎಂಬ ಬುಕ್ಕಿ ಆನ್ಲೈನ್ ಗೇಮಿಂಗ್ ನೆಟ್ವರ್ಕ್ ನಿರ್ಮಿಸಿದ್ದ. ತನ್ನ ಜಾಲಕ್ಕೆ ದೊಡ್ಡ ದೊಡ್ಡ ಉದ್ಯಮಿಗಳನ್ನು ಬೀಳಿಸಿ ಕೋಟ್ಯಂತರ ರೂಪಾಯಿ ದೋಚುತ್ತಿದ್ದ.
ಆರೋಪಿಗಾಗಿ ಕಾರ್ಯಾಚರಣೆ:ಪ್ರಕರಣ ದಾಖಲಾದಂತೆ ಎಚ್ಚೆತ್ತುಕೊಂಡ ಆರೋಪಿ ಅನಂತ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತೇನೆಂಬ ಭಯದಿಂದ ದುಬೈಗೆ ಪರಾರಿಯಾಗಿದ್ದಾನೆ. ಪೊಲೀಸರ ವರದಿ ಪ್ರಕಾರ ಆತ ಇನ್ನೂ ದುಬೈನಲ್ಲೇ ಉಳಿದುಕೊಂಡಿದ್ದಾನೆ. ಅಲ್ಲಿಂದ ಆರೋಪಿಯನ್ನು ಸೆರೆ ಹಿಡಿದು ಭಾರತಕ್ಕೆ ಕರೆತರಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆರೋಪಿ ಸಂಬಂಧಿಕರಿಗೂ ನೀಡಲಾಗಿತ್ತು ನೋಟೀಸ್: ಆರೋಪಿ ಪರಾರಿಯಾದಂತೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸಂಬಂಧಿಕರಿಗೆ ಠಾಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಆದರೆ ಅವರು ಕೂಡ ಪರಾರಿಯಾಗಿದ್ದಾರೆ. ಇದರಿಂದ ಒಬ್ಬ ಆರೋಪಿಯಲ್ಲದೇ ಬೇರೆಯವರು ಈ ಜಾಲದಲ್ಲಿ ಇದ್ದಾರೆಯೇ, ಈ ವಂಚನೆಯಲ್ಲಿ ಆರೋಪಿಯೊಂದಿಗೆ ಯಾರಾದರೂ ಉದ್ಯಮಿಗೆ ವಂಚಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಇದನ್ನೂ ಓದಿ:Nusrat Jahan: ಸಂಸದೆ, ನಟಿ ನುಸ್ರತ್ ಜಹಾನ್ ವಿರುದ್ಧ ವಂಚನೆ ಆರೋಪ: ಕೋರ್ಟ್, ಇಡಿ, ಪೊಲೀಸರಿಗೆ ದೂರು