ನವದೆಹಲಿ: ಸುಮಾರು 577 ಭಾರತೀಯ ಮೀನುಗಾರರು ಪಾಕಿಸ್ತಾನದ ವಶದಲ್ಲಿದ್ದು, ಅವರ ಬಂಧನ ಮತ್ತು ಮೀನುಗಾರಿಕಾ ದೋಣಿಗಳನ್ನು ನೆರೆಯ ದೇಶ ವಶಪಡಿಸಿಕೊಂಡಿರುವ ಘಟನೆಗಳನ್ನು ಭಾರತ ನಿರಂತರವಾಗಿ ಪ್ರಸ್ತಾಪಿಸುತ್ತಿದೆ ಎಂದು ಲೋಕಸಭೆಗೆ ಶುಕ್ರವಾರ ಮಾಹಿತಿ ನೀಡಲಾಗಿದೆ. ಮೇ 21, 2008 ರಂದು ಸಹಿ ಮಾಡಿದ ಭಾರತ-ಪಾಕಿಸ್ತಾನ "ಕಾನ್ಸುಲರ್ ಪ್ರವೇಶದ ಒಪ್ಪಂದ" ದ ಪ್ರಕಾರ, ಪ್ರತಿ ದೇಶದ ಜೈಲುಗಳಲ್ಲಿ ಇರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದರು.
ಜನವರಿ 1, 2022 ರಂದು ವಿನಿಮಯ ಮಾಡಿಕೊಂಡ ಮಾಹಿತಿ ಪ್ರಕಾರ, ಭಾರತೀಯ ಅಥವಾ ಭಾರತೀಯ ಎಂದು ನಂಬಲಾದ 577 ಮೀನುಗಾರರ ಬಂಧನವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು. ಅಲ್ಲದೆ, ಸರ್ಕಾರದ ದಾಖಲೆಗಳ ಪ್ರಕಾರ, 1,164 ಭಾರತೀಯ ಮೀನುಗಾರಿಕಾ ದೋಣಿಗಳು ಪಾಕಿಸ್ತಾನದ ವಶದಲ್ಲಿವೆ ಎಂದು ನಂಬಲಾಗಿದೆ ಎಂದು ಸಚಿವರು ಉಲ್ಲೇಖಿಸಿದರು.