ಲಖನೌ(ಉತ್ತರ ಪ್ರದೇಶ):ಡೆಂಗ್ಯೂ ಜ್ವರದ ಹಾವಳಿಯಿಂದ ಕೇವಲ 10 ದಿನಗಳಲ್ಲಿ 40 ಮಕ್ಕಳು ಸೇರಿ ಕನಿಷ್ಠ 50 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಡೆಂಗ್ಯೂಗಿಂತ ತುಂಬಾ ಅಪಾಯಕಾರಿಯಾದ ಡೆಂಗ್ಯೂ ಹೆಮರಾಜಿಕ್ ಫೀವರ್‌ನಿಂದ (ಡೆಂಗ್ಯೂ ರಕ್ತಸ್ರಾವ ಜ್ವರ) ಅವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಫಿರೋಜಾಬಾದ್ ಮಾತ್ರವಲ್ಲದೇ, ಪಶ್ಚಿಮ ಜಿಲ್ಲೆಗಳಾದ ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲೂ ಕೂಡಾ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವೈರಲ್ ಫೀವರ್ ಮತ್ತು ನಿರ್ಜಲೀಕರಣದಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ವಿಶ್ವ ಆರೋಗ್ಯ ಸಂಘಟನೆಯ ತಂಡವೂ ಕೂಡಾ ಇದು ಹೆಮರಾಜಿಕ್ ಡೆಂಗ್ಯೂ ಎಂದು ಹೇಳಿದೆ. ಇದು ಅತ್ಯಂತ ಅಪಾಯಕಾರಿ ಡೆಂಗ್ಯೂ. ಮಕ್ಕಳ ಪ್ಲೇಟ್‌ಲೆಟ್ ಎಣಿಕೆ ಇದ್ದಕ್ಕಿದ್ದಂತೆ ಕುಸಿದು ರಕ್ತಸ್ರಾವವಾಗುತ್ತದೆ ಎಂದು ಫಿರೋಜಾಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಹೇಳಿದ್ದಾರೆ.
ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (NCDC) ಮತ್ತು ರಾಷ್ಟ್ರೀಯ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂನ ತಜ್ಞರ ತಂಡವನ್ನು ಫಿರೋಜಾಬಾದ್‌ನ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಸರ್ಕಾರವು ಕಳಿಸಿದೆ.
ಇದನ್ನೂ ಓದಿ: ತಮಿಳುನಾಡು ಮಾದರಿಯಲ್ಲಿ ತೈಲದ ಮೇಲಿನ ಸೆಸ್ ಕಡಿತ: ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಎಂದ ಬೈರತಿ ಬಸವರಾಜ್