ನವದೆಹಲಿ:ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಥಿಯೇಟರ್, ಮಲ್ಟಿಫ್ಲೆಕ್ಸ್, ಕಚೇರಿ ಆವರಣ, ಹೋಟೆಲ್, ರೆಸ್ಟೋರೆಂಟ್ ಹಾಗು ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ಸ್ಥಳದ ಶೇ 5ರಷ್ಟನ್ನು ಎಲೆಕ್ಟ್ರಿಕ್ ವಾಹನಗಳಿಗೆ ಮೀಸಲಿಡಬೇಕೆಂದು ನಿರ್ಧರಿಸಿದೆ.
ಪ್ರಮುಖವಾಗಿ ನೂರಕ್ಕೂ ಹೆಚ್ಚು ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವ ಪಾರ್ಕಿಂಗ್ ಸ್ಥಳಗಳಲ್ಲಿ ಇದು ಕಡ್ಡಾಯವಾಗಲಿದ್ದು, ದೆಹಲಿ ಸರ್ಕಾರ ಈ ಕುರಿತು ಆದೇಶವೊಂದನ್ನು ಈಗಾಗಲೇ ಹೊರಡಿಸಿದೆ.
ದೆಹಲಿ ಸರ್ಕಾರದ ಇಂಧನ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಶೇಕಡಾ 5ರಷ್ಟು ವಾಹನ ನಿಲುಗಡೆ ಸಾಮರ್ಥ್ಯವನ್ನು ಎಲೆಕ್ಟ್ರಿಕ್ ವಾಹನಗಳಿಗೆ ಕಾಯ್ದಿರಿಸುವುದರ ಜೊತೆಗೆ, ನಿಧಾನಗತಿಯ ವಿದ್ಯುತ್ ಚಾರ್ಜಿಂಗ್ ಪಾಯಿಂಟ್‌ಗಳ ಸೌಲಭ್ಯವನ್ನೂ ಪಾರ್ಕಿಂಗ್ ಸ್ಥಳದಲ್ಲಿ ಒದಗಿಸಬೇಕೆಂದು ಸೂಚನೆ ನೀಡಲಾಗಿದೆ.