ಬಾಲಘಾಟ್: ಕೇವಲ 15 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಐದು ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಮಕ್ಕಳು ಮತ್ತು ಒಬ್ಬ ಮಹಿಳೆ ಮಾತ್ರ ಆ ಕುಟುಂಬದಲ್ಲಿ ಬದುಕುಳಿದಿದ್ದಾರೆ.
ಕೊರೊನಾ:15 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಐವರ ಸಾವು - ಮಧ್ಯಪ್ರದೇಶದ ಬಾಲ್ಘಾಟ್ನಲ್ಲಿ ಒಂದೇ ಕುಟುಂಬದ 5 ಮಂದಿ ಕೊರೊನಾಗೆ ಬಲಿ
ಮಧ್ಯಪ್ರದೇಶದ ಬಾಲ್ಘಾಟ್ನಲ್ಲಿ ಒಂದೇ ಕುಟುಂಬದ 5 ಮಂದಿ ಕೊರೊನಾ ಹಾಗೂ ಕೊರೊನಾ ಸಂಬಂಧಿತ ರೋಗ ಲಕ್ಷಣಗಳಿಂದ ಸಾವನ್ನಪ್ಪಿದ್ದು, ಈ ಕುಟುಂಬದಲ್ಲಿ ಒಬ್ಬ ಮಹಿಳೆ ಮತ್ತು ಐವರು ಮಕ್ಕಳು ಮಾತ್ರ ಬದುಕುಳಿದಿದ್ದು, ಜೀವನ ನಡೆಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬಾಲಘಾಟ್‌ನ ಬೊನ್‌ಖಾಟಾ ಗ್ರಾಮದಲ್ಲಿ ವಾಸಿಸುತ್ತಿದ್ದ ಕುಟುಂಬವೊಂದರಲ್ಲಿ, ಕುಟುಂಬದ ಮುಖ್ಯಸ್ಥ ಗೋವಿಂದ್ ರಾಮ್, ಅವರ ಪತ್ನಿ ಸುಶೀಲಾ ಮತ್ತು ಅವರ ಇಬ್ಬರು ಪುತ್ರರಾದ ಮಹೇಂದ್ರ ಮತ್ತು ಸಂತೋಷ್, ಮತ್ತು ಸಂತೋಷ್ ಅವರ ಪತ್ನಿ ನೀಲು 15 ದಿನಗಳಲ್ಲಿ ಕೊರೊನಾದಿಂದ ನಿಧನರಾದರು. ಈಗ ಮನೆಯಲ್ಲಿ ಮಹೇಂದ್ರ ಎಂಬುವವರ ಪತ್ನಿ ಲಲಿತಾ ಮತ್ತು ಒಟ್ಟು 5 ಮಕ್ಕಳು ಇದ್ದಾರೆ . ಈ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಈ ವಿಧವೆ ಮಹಿಳೆ ಹೆಗಲಿಗಿದೆ. ಹೀಗಾಗಿ ಈ ಕಷ್ಟದ ಸಮಯದಲ್ಲಿ ಸರ್ಕಾರ ಮತ್ತು ಆಡಳಿತವು ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈ ಕುಟುಂಬ ಆರ್ಥಿಕವಾಗಿ ಸಬಲವಾಗಿಲ್ಲ. ದುಡಿಯುವ ಜನರೆಲ್ಲ ಕೋವಿಡ್ಗೆ ಬಲಿಯಾಗಿದ್ದಾರೆ. ಹೀಗಾಗಿ ಐವರು ಮಕ್ಕಳನ್ನು ನೋಡಿಕೊಳ್ಳಲು ಲಲಿತಾ ಅವರು ಪರಿತಪಿಸುವಂತಾಗಿದೆ.
ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮಧ್ಯಪ್ರದೇಶ ಸರ್ಕಾರ ವಿಶೇಷ ಯೋಜನೆ ಸಿದ್ಧಪಡಿಸಿದೆ, ಇದರ ಅಡಿ ಸರ್ಕಾರವು ನಿರ್ಗತಿಕ ಮಕ್ಕಳಿಗೆ 5 ಸಾವಿರ ರೂಪಾಯಿ ಸಹಾಯಧನ ನೀಡುತ್ತದೆ. ಆದರೆ, ಈ ಮಕ್ಕಳ ಪೋಷಕರು ಸಾಯುವಾಗ ಕೊರೊನಾ ಶಂಕೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಕೊರೊನಾ ದೃಢಪಟ್ಟ ವರದಿ ಇಲ್ಲ. ಸೋಂಕು ಶಂಕಿತ ಸಾವು ಎಂದು ಅವರನ್ನು ಅಂತ್ಯಕ್ರಿಯೆ ಮಾಡಲಾಯಿತು. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರ ಮತ್ತು ಆಡಳಿತದ ಎದುರು ಈ ಕುಟುಂಬವು ಸರ್ಕಾರಿ ಯೋಜನೆಗಳಿಂದ ಲಾಭ ಪಡೆಯಲು ಅರ್ಹವೇ ಎಂಬ ಪ್ರಶ್ನೆ ತಲೆ ದೋರಿದೆ.