ಕಡಲೂರು, ತಮಿಳುನಾಡು: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿನ ಮೇಲ್ಪಟ್ಟಾಂಬಕ್ಕಂ ಗ್ರಾಮದಲ್ಲಿ ಇಂದು ಬೆಳಗ್ಗೆ ಎರಡು ಬಸ್ಗಳು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಡಲೂರು ಕೇಂದ್ರ ಬಸ್ ನಿಲ್ದಾಣದಿಂದ ತಿರುವಣ್ಣಾಮಲೈಗೆ ತೆರಳುತ್ತಿದ್ದ ಖಾಸಗಿ ಬಸ್ ಮೇಲ್ಪಟ್ಟಾಂಬಕ್ಕಂ ಬಳಿ ಸಾಗುತ್ತಿತ್ತು. ಆಗ ಪನ್ರುತಿ ಕಡೆಯಿಂದ ಬರುತ್ತಿದ್ದ ದುರ್ಗಾ ಎಂಬ ಖಾಸಗಿ ಬಸ್ ಮಧ್ಯೆ ಈ ಅಪಘಾತ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ಇಬ್ಬರು ಖಾಸಗಿ ಬಸ್ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐದಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುದುವಿನ ಜಿಪಂ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಚಿಕಿತ್ಸೆಗಾಗಿ ಪುದುಚೇರಿಗೆ ತೆರಳಿದ್ದ ಮಹಿಳೆಯೊಬ್ಬರು ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ ಐದಕ್ಕೆ ಏರಿದೆ.
ಬಸ್ ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ಬಳಿಕ ಅಪಘಾತದ ವಾಹನದಲ್ಲಿದ್ದ ಮೃತದೇಹಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಪನ್ರುತಿ ಕಡೆಯಿಂದ ಬರುತ್ತಿದ್ದ ದುರ್ಗಾ ಎಂಬ ಖಾಸಗಿ ಬಸ್ನ ಟೈರ್ ಬ್ಲಾಸ್ಟ್ ಆಗಿದೆ. ಆಗ ಎದುರಿಗೆ ಬರುತ್ತಿದ್ದ ಕಡಲೂರಿನಿಂದ ತಿರುವಣ್ಣಾಮಲೈಗೆ ತೆರಳುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆ ಮೂಲಕ ತಿಳಿದು ಬಂದಿದೆ. ರಸ್ತೆಯಲ್ಲಿ ಅಪಘಾತಗೊಂಡ ಬಸ್ಗಳನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಇನ್ನಷ್ಟು ಮಾಹಿತಿ ನೀಡಲಿದ್ದಾರೆ.