ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿಚಾರಣೆಯನ್ನು ಇಡಿ ನಡೆಸುತ್ತಿದ್ದು, ಇದರ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ಹೈಡ್ರಾಮ ಸೃಷ್ಟಿಸಿತ್ತು. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡಸಿದ್ದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಐವರು ಸಂಸತ್ ಸದಸ್ಯರು ಸೇರಿದಂತೆ 240 ಕಾಂಗ್ರೆಸ್ ಕಾರ್ಯಕರ್ತರನ್ನು ಬುಧವಾರ ಬಂಧಿಸಲಾಗಿದೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾನೂನು ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಲ್ವರು ಲೋಕಸಭಾ ಸಂಸದರು ಮತ್ತು ಒಬ್ಬ ರಾಜ್ಯಸಭಾ ಸದಸ್ಯ ಸೇರಿದಂತೆ ದೆಹಲಿ ಪೊಲೀಸ್ ಕಾಯಿದೆ ಸೆಕ್ಷನ್ 65 ರ ಅಡಿ ಒಟ್ಟು 240 ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ಸಾಗರ್ ಪ್ರೀತ್ ಹೂಡಾ ಹೇಳಿದ್ದಾರೆ.
ಸೋಮವಾರದಿಂದ ಜಂತರ್ ಮಂತರ್ನಲ್ಲಿ ಪ್ರಾರಂಭ ಪ್ರತಿಭಟನೆಯಲ್ಲಿ ಇಲ್ಲಿಯವರೆಗೆ ಹಲವು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿ ಸಾರ್ವಜನಿಕ ಗಲಭೆಗಳನ್ನು ಸೃಷ್ಟಿಸಲು ಪದೇ ಪದೆ ಪ್ರಯತ್ನಿಸುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೂಡಾ ಹೇಳಿದರು.