ರಾಂಚಿ, ಜಾರ್ಖಂಡ್ :ಕಳೆದ 8 ತಿಂಗಳಿಂದ ಸೌದಿ ಅರೇಬಿಯಾದಲ್ಲಿ ಜಾರ್ಖಂಡ್ನ ಐವರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಈ ಎಲ್ಲ ಕಾರ್ಮಿಕರು ಅಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ತಮ್ಮನ್ನು ತಾಯ್ನಾಡಿಗೆ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಸಹಾಯ ಕೋರಿ ಮನವಿ ಮಾಡಿಕೊಂಡಿದ್ದಾರೆ. ಗಿರಿದಿಹ್ ಜಿಲ್ಲೆಯ ಸರಿಯಾ ಬ್ಲಾಕ್ ಕುಸ್ಮಾದಿಹ್ ಪಂಚಾಯತ್‌ನ ಜಗದೀಶ್, ಜಿವ್ಲಾಲ್, ಬೊಕಾರೊ ಜಿಲ್ಲೆಯ ವಿನೋದ್ ಮತ್ತು ಬಿಷ್ಣುಗಢದ ಚಿಂತಮನ್ ಮತ್ತು ವೀರೇಂದ್ರ ಸಿಲುಕಿಕೊಂಡಿರುವ ಕಾರ್ಮಿಕರಾಗಿದ್ದಾರೆ.
ಈ ಎಲ್ಲಾ ಕಾರ್ಮಿಕರು ಮಾರ್ಚ್ 28, 2023 ರಂದು ಅಲ್ ಮುರಬ್ಬಾ ಅಲ್ ಹಾದಿಯ ಕಂಪನಿಯಲ್ಲಿ OPG ಆಫ್ ಟ್ರಾನ್ಸ್‌ಮಿಷನ್‌ನಲ್ಲಿ ಕೆಲಸ ಮಾಡಲು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಆದರೆ, ಕಳೆದ ಎಂಟು ತಿಂಗಳಿನಿಂದ ಈ ಎಲ್ಲ ಕಾರ್ಮಿಕರು ಯಾವುದೇ ಸಂಬಳವನ್ನು ಪಡೆದುಕೊಂಡಿಲ್ಲ. ಸಂಬಳ ನೀಡದೇ ಇರುವುದರಿಂದ ಇವರೆಲ್ಲ ತಿನ್ನಲು ಆಹಾರ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಹೀಗೆ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಈ ಎಲ್ಲ ಕಾರ್ಮಿಕರು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಮಾಡಿ ಹಂಚಿಕೊಂಡಿದ್ದಾರೆ. ಕಳೆದ ಎಂಟು ತಿಂಗಳಿಂದ ಕೂಲಿ ಕೆಲಸ ಮಾಡಿದರೂ ಸಂಬಳ ಬಂದಿಲ್ಲ. ಆಹಾರ ಸಮಸ್ಯೆ ಹೆಚ್ಚಾಗಿದೆ, ದಯವಿಟ್ಟು ನಮ್ಮ ನೆರವಿಗೆ ಬನ್ನಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ನಮ್ಮೆಲ್ಲರ ವೀಸಾ ಅವಧಿಯೂ ಮುಗಿದಿದ್ದು, ಭಾರತಕ್ಕೆ ಬರುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ನಮ್ಮ ಸಹಾಯಕ್ಕೆ ಧಾವಿಸಬೇಕು. ಭಾರತಕ್ಕೆ ಬರುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಕಣ್ಣೀರಿಡುವ ಮೂಲಕ ಮನವಿ ಮಾಡಿದ್ದಾರೆ.