ದಾಟಿಯಾ (ಮಧ್ಯಪ್ರದೇಶ): ಜಾನುವಾರು ಮೇಯಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದು 5 ಮಂದಿ ಸಾವನ್ನಪ್ಪಿ, 8 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರೆಂಡಾ ಗ್ರಾಮದಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಡಾಂಗಿ ಮತ್ತು ಪಾಲ್ ಸಮುದಾಯದ ನಡುವೆ ಗುಂಡಿನ ಚಕಮಕಿ ನಡೆದಿದೆ. ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ತವರು ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿ ದಾಟಿಯಾ ಎಸ್ಪಿ ಪ್ರದೀಪ್ ಶರ್ಮಾ, ಕಳೆದ ಮೂರು ದಿನಗಳ ಹಿಂದೆ ಜಾನುವಾರುಗಳನ್ನು ಮೇಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಡಾಂಗಿ ಮತ್ತು ಪ್ರೀತಮ್ ಪಾಲ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ, ಇಬ್ಬರ ಜಗಳ ತಾರಕ್ಕೇರಿದ್ದು, ಈ ವೇಳೆ ಪ್ರಕಾಶ್ ಪ್ರೀತಮ್ಗೆ ಕಪಾಳಮೋಕ್ಷ ಮಾಡಿದ್ದ. ಈ ಸಂಬಂಧ ಎರಡು ಕಡೆಯಿಂದಲೂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.
ಬುಧವಾರ ಬೆಳಗ್ಗೆ ಮತ್ತೆ ಎರಡು ಸಮುದಾಯದವರು ಮುಖಾಮುಖಿಯಾಗಿ ಈ ವೇಳೆ ಎರಡೂ ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ 5 ಸಾವನ್ನಪ್ಪಿದ್ದು, 8 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ಮೃತರನ್ನು ಪ್ರಕಾಶ್ ಡಾಂಗಿ, ರಾಮ್ ನರೇಶ್ ಡಾಂಗಿ, ಸುರೇಂದ್ರ ಡಾಂಗಿ, ರಾಜೇಂದ್ರ ಪಾಲ್, ರಾಘವೇಂದ್ರ ಪಾಲ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ 30 ವಯಸ್ಸಿಗಿಂತ ಮೇಲ್ಪಟ್ಟವರು. ಗಾಯಾಳುಗಳನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ಎಸ್ಪಿ ಪ್ರದೀಪ್ ಶರ್ಮಾ ಮಾಹಿತಿ ನೀಡಿದರು.