ಕಥುವಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಬಿಲ್ಲವರ್‌ನ ಧನು ಪರೋಲ್ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಕೂಗ್‌ನಿಂದ ದನ್ನು ಪೆರೋಲ್‌ಗೆ ಸಾಗಿಸುತ್ತಿದ್ದ ವಾಹನವು ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.
ಅಪಘಾತ ಆದ ತಕ್ಷಣವೇ ನಾಲ್ವರು ಸಾವನ್ನಪ್ಪಿದರೆ, ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯ ಅಸುನೀಗಿದ್ದಾರೆ. ಈ ನಡುವೆ ಗಾಯಗೊಂಡ 15 ಜನರನ್ನು ಬಿಲ್ಲವರ್‌ನಲ್ಲಿರುವ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಬಂಟು, ಹನ್ಸ್ ರಾಜ್, ಅಜೀತ್ ಸಿಂಗ್, ಅಮ್ರೂ ಮತ್ತು ಕಾಕು ಎಂದು ಗುರುತಿಸಲಾಗಿದೆ. ಬಿಲ್ಲವರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಗಂಭೀರ ಗಾಯಗೊಂಡಿದ್ದ ಇಬ್ಬರು ಪ್ರಯಾಣಿಕರಾದ ರೇಷ್ಮಾ ಬೇಗಂ ಮತ್ತು ನೀಲಂ ಅವರನ್ನು ನಂತರ ವಿಶೇಷ ಚಿಕಿತ್ಸೆಗಾಗಿ ಎಸ್‌ಡಿಹೆಚ್ ಬಿಲ್ಲವರ್‌ನಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಕಥುವಾಕ್ಕೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಬಿಲ್ಲವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ 4:40 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಮ್ಯಾಕ್ಸಿ ಕ್ಯಾಬ್ (ನೋಂದಣಿ ಸಂಖ್ಯೆ JK06-2992) ಕೌಗ್‌ನಿಂದ ಧನು ಪರೋಲ್‌ಗೆ ತೆರಳುತ್ತಿದ್ದಾಗ ಜಾರು ಪರಿಸ್ಥಿತಿಯಿಂದಾಗಿ 100-150 ಮೀಟರ್ ಆಳದ ಕಮರಿಗೆ ಉರುಳಿದೆ ಎಂದು ವರದಿಗಳು ತಿಳಿಸಿವೆ. ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ನಂತರ, ಎಸ್‌ಎಚ್‌ಒ ಸುನೀಲ್ ಶರ್ಮಾ ನೇತೃತ್ವದ ಪೊಲೀಸ್ ಠಾಣೆಯ ತಂಡವೂ ಅಪಘಾತದ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿ ಕೊಂಡಿತ್ತು. ಈ ಸಂಬಂಧ ಬಿಲ್ಲವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುರ್ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.