ಪ್ರಸ್ತುತ ಸುಲಭವಾಗಿ ಕೈಗೆಟಕುವಂತಹ, ಹಲವಾರು ಜನನ ನಿಯಂತ್ರಣ ವಿಧಾನಗಳು ಲಭ್ಯವಿದೆ. ಆದರೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇತರ ವಿಧಾನಗಳ ಮಾಹಿತಿಯ ಕೊರತೆಯಿಂದ ಮತ್ತು ಮಾತ್ರೆಗಳು ಸುಲಭವಾಗಿ ಮತ್ತು ಕೈಗೆಟಕುವ ದರದಲ್ಲಿ ದೊರೆಯುವ ಕಾರಣ ಇನ್ನೂ ಮಾತ್ರೆಗಳನ್ನೇ ಅವಲಂಬಿಸಿದ್ದಾರೆ. ಹಿರಿಯ ಸ್ತ್ರೀರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಂದರ್ಭಗಳಲ್ಲಿ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಬಯಸಲು ಮಹಿಳೆಯರು ಇತರ ಯಾವುದೇ ವಿಧಾನಗಳಿಗಿಂತ ಗರ್ಭನಿರೋಧಕ ಮಾತ್ರೆಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎನ್ನುತ್ತಾರೆ. ಮಾತ್ರೆಯೊಂದೇ ಅಲ್ಲದೆ ಇತರ ಗರ್ಭನಿರೋಧಕ ವಿಧಾನಗಳ ಬಗ್ಗೆ ಡಾ.ವಿಜಯಲಕ್ಷ್ಮಿ ಅವರು ಮಾಹಿತಿ ನೀಡಿದ್ದಾರೆ.
ಇತರ ಗರ್ಭನಿರೋಧಕಗಳು
ಕಾಂಡೋಮ್ಗಳು :ಗರ್ಭನಿರೋಧಕಗಳಾಗಿ ಕಾಂಡೋಮ್ಗಳು ಹೆಚ್ಚು ಜನಪ್ರಿಯ ಆಯ್ಕೆಯಾಗಿವೆ. ಪುರುಷ ಕಾಂಡೋಮ್‌ಗಳು ಶಿಶ್ನದ ಕವಚಗಳಾಗಿ ಗಂಡು ಮತ್ತು ಹೆಣ್ಣಿನ ನಡುವಿನ ಲೈಂಗಿಕ ದ್ರವಗಳ ಪ್ರಸರಣಕ್ಕೆ ದೈಹಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತವೆ. ಅನಪೇಕ್ಷಿತ ಗರ್ಭಧಾರಣೆಯಿಂದ ಮಾತ್ರವಲ್ಲದೆ, ಕಾಂಡೋಮ್‌ಗಳು ಲೈಂಗಿಕವಾಗಿ ಹರಡುವ ರೋಗಗಳಾದ HIV AIDS, ಇತ್ಯಾದಿಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.
ಆದಾಗ್ಯೂ, ಕಾಂಡೋಮ್‌ಗಳ ಅಸಮರ್ಪಕ ಗುಣಮಟ್ಟ, ಅಸಮರ್ಪಕ ಬಳಕೆ ಮತ್ತು ಅಜಾಗರೂಕತೆಯಿಂದ ಕೆಲವೊಮ್ಮೆ ಕಾಂಡೋಮ್ಗಳು ಒಡೆಯುವ ಅಪಾಯವನ್ನು ಹೆಚ್ಚಿಸುತ್ತವೆ. ಹೆಚ್ಚಿನವರು ಕಾಂಡೋಮ್ಗಳು ಪುರುಷರಿಗೆ ಮಾತ್ರ ಎಂದು ಭಾವಿಸಿರುತ್ತಾರೆ. ಆದರೆ, ವಾಸ್ತವವಾಗಿ, ಮಹಿಳೆಯರಿಗೂ ಕಾಂಡೋಮ್ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಗರ್ಭನಿರೋಧಕವಾಗಿ ಕಾಂಡೊಮ್ಗಳನ್ನು ಸುಲಭವಾಗಿ ಬಳಸಬಹುದು. ಅದರೊಮದಿಗೆ ಕಾಂಡೊಮ್ನಿಂದ ದೇಹದ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ. ಮಹಿಳೆಯರ ಕಾಂಡೋಮ್‌ಗಳು ಹೈಪೋಲಾರ್ಜನಿಕ್ ಆಗಿರುತ್ತವೆ. ಅಂದರೆ ಅಲರ್ಜಿ ಆಗುವ ಸಾಧ್ಯತೆ ಕಡಿಮೆ. ಸಂಭೋಗದ ನಂತರವೂ ಅವು ತಮ್ಮ ಸ್ಥಳದಿಂದ ಕದಲುವುದಿಲ್ಲ.
ಮಾರ್ನಿಂಗ್ ಆಫ್ಟರ್ ಪಿಲ್ಸ್ :ತುರ್ತು ಗರ್ಭನಿರೋಧಕ ಮಾತ್ರೆಗಳು ಎಂದೂ ಕರೆಯಲ್ಪಡುವ ಮಾರ್ನಿಂಗ್ ಆಫ್ಟರ್ ಪಿಲ್ಸ್ ಅಸುರಕ್ಷಿತ ಸಂಭೋಗ, ಸಂಭೋಗದ ಸಮಯದಲ್ಲಿ ಕಾಂಡೋಮ್ ಒಡೆಯುವುದು ಮತ್ತು ಇತರ ಕಾರಣಗಳಿಂದ ಗರ್ಭ ಧರಿಸುವುದನ್ನು ತಡೆಗಟ್ಟುವಲ್ಲಿ ಸಹಾಯಕವಾಗಬಹುದು. ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಈ ಮಾತ್ರೆಗಳನ್ನು ಸಂಭೋಗ ನಡೆದು 72 ಗಂಟೆಗಳ ಒಳಗೆ ತೆಗೆದುಕೊಳ್ಳಬಹುದು.
ಒಂದು ವೇಳೆ ಮಾತ್ರೆ ಸೇವನೆ ತಡವಾದರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆ. ತುರ್ತು ಸಂದರ್ಭಗಳಲ್ಲಿ ಈ ಮಾತ್ರೆಗಳು ತುಂಬಾ ಪ್ರಯೋಜನಕಾರಿಯಾಗಿದ್ದರೂ, ವಾಕರಿಕೆ, ತಲೆನೋವು, ಎದೆ ನೋವು, ಕೆಳ ಹೊಟ್ಟೆ ನೋವು ಇತ್ಯಾದಿಗಳಂತಹ ಕೆಲವು ಅಡ್ಡಪರಿಣಾಮಗಳು ಇರುವ ಸಾಧ್ಯತೆ ಹೆಚ್ಚು.
ಕಾಪರ್ ಟಿ :ಕಾಪರ್ ಟಿ ಎಂಬುದು 'ಟಿ' ಆಕಾರದ ಸಾಧನವಾಗಿದ್ದು, ಅದರ ಸುತ್ತಲೂ ತಾಮ್ರದ ತಂತಿಯನ್ನು ಸುತ್ತಲಾಗಿರುತ್ತದೆ. ಇದು ಗರ್ಭಾವಸ್ಥೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಈ ಸಾಧನವನ್ನು ವೈದ್ಯರು ಗರ್ಭಾಶಯದೊಳಗೆ ಅಳವಡಿಸುತ್ತಾರೆ. ಮಹಿಳೆ ಗರ್ಭ ಧರಿಸಲು ಸಿದ್ಧವಾದ ಸಂದರ್ಭದಲ್ಲಿ ಆ ಸಾಧನವನ್ನು ತೆಗೆದು ಹಾಕಬಹುದು. ಇದು ರಿವರ್ಸಿಬಲ್, ದೀರ್ಘಕಾಲಕ್ಕೆ ಬಳಸುವಂತಹ ಗರ್ಭನಿರೋಧಕವಾಗಿದ್ದು, ಈ ಪ್ರಕಾರವನ್ನು ಅವಲಂಬಿಸಿಕೊಂಡು ಮೂರರಿಂದ ಹತ್ತು ವರ್ಷಗಳವರೆಗೆ ಒಂದು ಸಾಧನವನ್ನು ಬಳಸಬಹುದು.
ಜನನ ನಿಯಂತ್ರಣ ಶಾಟ್ :ಈ ಗರ್ಭನಿರೋಧಕ ಶಾಟ್(ಚುಚ್ಚುಮದ್ದು) ಗಳನ್ನು ಪ್ರೊಜೆಸ್ಟಿನ್ನಿಂದ ತಯಾರಿಸಲಾಗುತ್ತದೆ. ಇದನ್ನು 3-4 ತಿಂಗಳ ಮಧ್ಯಂತರದಲ್ಲಿ ತೆಗೆದುಕೊಳ್ಳಬಹುದು. ಇದು ಮಹಿಳೆಯರಲ್ಲಿ ಅಂಡೋತ್ಪತ್ತಿ ಪ್ರಕ್ರಿಯೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ತುಲನಾತ್ಮಕವಾಗಿ ಕಡಿಮೆ ಅಡ್ಡ ಪರಿಣಾಮಗಳನ್ನು ಹೊಂದಿರುವ ಕಾರಣ ಗರ್ಭನಿರೋಧಕ ಮಾತ್ರೆಗಳಿಗಿಂತ ಉತ್ತಮವೆಂದು ಪರಿಗಣಿಸಲಾಗಿದೆ. ಹೊಸ ಬಾಣಂತಿ ಮತ್ತು ಹಾಲುಣಿಸುವ ತಾಯಂದಿರು ಹೆಚ್ಚಾಗಿ ಈ ವಿಧಾನವನ್ನು ಬಯಸುತ್ತಾರೆ.
ವಜಿನಲ್ ರಿಂಗ್ :ಮೆದುವಾದ ಪ್ಲಾಸ್ಟಿಕ್ ರಿಂಗ್ ಇರುವ ತಂತ್ರಜ್ಞಾನವಿದು. ಇದನ್ನು ಯೋನಿಗೊಳಗೆ ಜೋಡಿಸಲಾಗುತ್ತದೆ. ಇದು ಗರ್ಭಧಾರಣೆಯನ್ನು ತಪ್ಪಿಸಲು ನಿರಂತರವಾಗಿ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ರಿಂಗ್ ಅನ್ನು ಮೂರು ವಾರಗಳ ಕಾಲ ಯೋನಿಯಲ್ಲಿ ಇಡಬೇಕು. ನಂತರ ಏಳು ದಿನಗಳ ವಿರಾಮದಲ್ಲಿ(ಋತುಸ್ರಾವದ ಸಂದರ್ಭ) ಇದನ್ನು ತೆಗೆಯಬಹುದು. ಮತ್ತೆ ಹೊಸದಾದ ರಿಂಗ್ ಅನ್ನು ಬಳಸಬಹುದು. ಉಂಗುರವು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳನ್ನು ಸ್ರವಿಸುತ್ತದೆ.
ಇದನ್ನೂ ಓದಿ:ಗರ್ಭಾವಸ್ಥೆಯಲ್ಲಿನ ಸಮಸ್ಯೆಗಳಿಗೂ ತಲೆನೋವಿಗೂ ಸಂಬಂಧ ಇದೆಯಾ?