ಅಮರಾವತಿ (ಮಹಾರಾಷ್ಟ್ರ): ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೆಲ್ಘಾಟ್ನಲ್ಲಿ ಸುಮಾರು 49 ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೆಲ್ಘಾಟ್ ಬುಡಕಟ್ಟು ಪ್ರಾಬಲ್ಯದ ಪ್ರದೇಶವಾಗಿದೆ ಮತ್ತು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಮಹಾರಾಷ್ಟ್ರ ಸರ್ಕಾರವು ಹೆಚ್ಚು ಗಮನ ಹರಿಸದ ಕಾರಣದಿಂದ ಆದಿವಾಸಿಗಳಲ್ಲಿ ಪೌಷ್ಟಿಕ ಆಹಾರದ ಕೊರತೆ ಉಂಟಾಗಿದೆ ಎನ್ನಲಾಗ್ತಿದೆ.
ಇದು ಮಾತ್ರವಲ್ಲದೇ, 29 ದಿನಗಳಿಂದ ಒಂದು ವರ್ಷದೊಳಗಿನ ಮಕ್ಕಳು ಸೇರಿದಂತೆ ಸುಮಾರು 13 ಮಕ್ಕಳು ಗರ್ಭದಲ್ಲೇ ಸಾವನ್ನಪ್ಪಿವೆ ಎಂಬ ಆಘಾತಕಾರಿ ವಿಚಾರ ತನಿಖೆಯಿಂದ ತಿಳಿದುಬಂದಿದೆ.
ಅಮರಾವತಿಯ ಸಂಸದೆ ನವನೀತ್ ಕೌರ್ ರಾಣಾ ಈಗ ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದಾರೆ. ಅಮರಾವತಿಯಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಸಾವು ಸಂಭವಿಸಿದ್ದು, ಕೇಂದ್ರ ಸರ್ಕಾರವು ಗಮನಹರಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರವು ಈ ದುರಂತದ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಆದ್ದರಿಂದಲೇ ನವನೀತ್ ಕೌರ್ ರಾಣಾ ಕೇಂದ್ರದೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.
ಬುಡಕಟ್ಟು ಮಹಿಳೆಯರ ಕಾಳಜಿ ಮತ್ತು ಪೋಷಣೆಗೆ ಸಂಬಂಧಿಸಿದಂತೆ ಕೇಂದ್ರದಿಂದ ರಾಜ್ಯಕ್ಕೆ ಸಾಕಷ್ಟು ಅನುದಾನ ಬರುತ್ತದೆ. ಆದರೂ ಇಲ್ಲಿನ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಸಂಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರೈತರ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವುದಿಲ್ಲ, ಇದು ವದಂತಿಯಷ್ಟೇ: ಸಚಿವ ಸುನಿಲ್ ಕುಮಾರ್