ನಾಗ್ಪುರ(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸಾಕಷ್ಟು ಕಳವಳಕ್ಕೆ ಕಾರಣವಾಗಿರುವ ಶಿಶುಗಳ ಮರಣದ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದೇ ವರ್ಷದ ಏಪ್ರಿಲ್ನಿಂದ ಅಕ್ಟೋಬರ್ ತಿಂಗಳ ನಡುವೆ ರಾಜ್ಯಾದ್ಯಂತ 4,800ಕ್ಕೂ ಅಧಿಕ ಕಂದಮ್ಮಗಳು ಸಾವಿಗೀಡಾಗಿವೆ ಎಂದು ರಾಜ್ಯ ಆರೋಗ್ಯ ಸಚಿವ ತಾನಜಿ ಸಾವಂತ್ ಬುಧವಾರ ವಿಧಾನಸಭೆಗೆ ಅಂಕಿಅಂಶ ಒದಗಿಸಿದ್ದಾರೆ.
''ಮಹಾರಾಷ್ಟ್ರದಲ್ಲಿ ಏಪ್ರಿಲ್-ಅಕ್ಟೋಬರ್ನ ಆರು ತಿಂಗಳ ಅವಧಿಯಲ್ಲಿ ಒಟ್ಟಾರೆ 4,872 ನವಜಾತ ಶಿಶುಗಳು ಮರಣ ಹೊಂದಿವೆ. ಮೃತ ಶಿಶುಗಳ ವಯಸ್ಸು ಶೂನ್ಯದಿಂದ 28 ದಿನಗಳು ಮಾತ್ರ. ಇದನ್ನು ಸರಾಸರಿಗೆ ಹೋಲಿಸಿದರೆ ಪ್ರತಿದಿನ 23 ಶಿಶುಗಳ ಸಾವು ಸಂಭವಿಸಿವೆ'' ಎಂದು ಸಚಿವರು ಹೇಳಿದ್ದಾರೆ. ಶಾಸಕ ಸಚಿನ್ ಕಲ್ಯಾಣಶೆಟ್ಟಿ ಕೇಳಿದ ಪ್ರಶ್ನೆಗೆ ಈ ಲಿಖಿತ ಉತ್ತರ ನೀಡಲಾಗಿದೆ.