ನವದೆಹಲಿ: ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ಇತ್ತೀಚಿನ ವಿಶ್ಲೇಷಣೆಯು, ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಶಾಸಕರ ಮೇಲಿನ ಅಪರಾಧ ಪ್ರಕರಣಗಳು ಮತ್ತು ಆಸ್ತಿ ವಿವರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ಇಡಬ್ಲೂ) ನಡೆಸಿದ ಈ ವಿಶ್ಲೇಷಣೆಯು ದೇಶದ ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರಸ್ತುತ ಶಾಸಕರು ಸಲ್ಲಿಸಿದ್ದ ಪ್ರಮಾಣ ಪತ್ರಗಳನ್ನು ಆಧರಿಸಿದೆ.
ದೇಶದ ಶೇ 44 ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಕೇಸ್: ಭಾರತದ ಎಲ್ಲ 28 ರಾಜ್ಯಗಳ ವಿಧಾನಸಭಾ ಕ್ಷೇತ್ರಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4,033 ಶಾಸಕರ ಪೈಕಿ 4,001 ಶಾಸಕರ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಈ ಅಂಕಿ ಅಂಶಗಳನ್ನು ಶಾಸಕರ ಇತ್ತೀಚಿನ ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್ನಿಂದ ಸಂಗ್ರಹಿಸಲಾಗಿದೆ. ಈ ಮಾಹಿತಿಯಂತೆ, ದೇಶದ ಎಲ್ಲ ರಾಜ್ಯ ವಿಧಾನಸಭಾ ಕ್ಷೇತ್ರಗಳ ಶೇ. 44ರಷ್ಟು ಶಾಸಕರು ತಮ್ಮ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 1,136 ಅಂದರೆ ಶೇ. 28ರಷ್ಟು ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಮಾಹಿತಿ ನೀಡಿದ್ದಾರೆ. ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಇತರ ಪ್ರಕರಣಗಳನ್ನು ಇವರು ಹೊಂದಿದ್ದಾರೆ.
ರಾಜ್ಯವಾರು ನೋಡುವುದಾದರೆ, ಕೇರಳದಲ್ಲಿನ 135 ಶಾಸಕರ ಪೈಕಿ 95 ಶಾಸಕರು ಅಂದರೆ ಶೇ.70 ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಬಿಹಾರದಲ್ಲಿ 242 ಶಾಸಕರಲ್ಲಿ 161 ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಅಂದರೆ ಶೇ. 67ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ದೆಹಲಿಯಲ್ಲಿ 70 ಶಾಸಕರಲ್ಲಿ 44 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ, ಅಂದರೆ ಶೇ. 63ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಮಹಾರಾಷ್ಟ್ರದ 284 ಶಾಸಕರ ಪೈಕಿ 175 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ಇದೆ. ಅಂದರೆ ಶೇ. 62ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ. ತೆಲಂಗಾಣದಲ್ಲಿ 118 ಶಾಸಕರ ಪೈಕಿ 72 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅಂದರೆ ಶೇ. 61ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ. ತಮಿಳುನಾಡಿನಲ್ಲಿ 224 ಶಾಸಕರ ಪೈಕಿ 134 (ಶೇ.60) ಶಾಸಕರು ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ.
ವಿವಿಧ ಗಂಭೀರ ಪ್ರಕರಣಗಳನ್ನು ಘೋಷಿಸಿಕೊಂಡಿರುವ ಶಾಸಕರ ಪಟ್ಟಿಯನ್ನು ನೋಡುವುದಾದರೆ, ದೆಹಲಿಯಲ್ಲಿ 70 ಶಾಸಕರಲ್ಲಿ 37 (ಶೇ. 53) ಶಾಸಕರು ಗಂಭೀರ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಬಿಹಾರದಲ್ಲಿ 242 ಶಾಸಕರ ಪೈಕಿ 122 (ಶೇ. 50) ಶಾಸಕರು, ಮಹಾರಾಷ್ಟ್ರದಲ್ಲಿ 284 ಶಾಸಕರಲ್ಲಿ 114 (ಶೇ. 40) ಶಾಸಕರು, ಜಾರ್ಖಂಡ್ನಲ್ಲಿ 79 ಶಾಸಕರಲ್ಲಿ 31(ಶೇ.39) ಶಾಸಕರು, ತೆಲಂಗಾಣದಲ್ಲಿ 118 ಶಾಸಕರಲ್ಲಿ 46 (ಶೇ. 39) ಶಾಸಕರು ಮತ್ತು ಉತ್ತರ ಪ್ರದೇಶದಲ್ಲಿ 403 ಶಾಸಕರಲ್ಲಿ 155 (ಶೇ.38) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ತಿಳಿಸಿದ್ದಾರೆ.
ಮಹಿಳೆಯರ ವಿರುದ್ಧ ಶಾಸಕರ ದೌರ್ಜನ್ಯ ಪ್ರಕರಣಗಳು: ಶಾಸಕರು ಮಹಿಳೆಯರ ವಿರುದ್ಧ ನಡೆಸಿರುವ ದೌರ್ಜನ್ಯ ಪ್ರಕರಣಗಳನ್ನೂ ಇದು ಒಳಗೊಂಡಿದೆ. ಒಟ್ಟು 114 ಶಾಸಕರು ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇದರಲ್ಲಿ 14 ಶಾಸಕರು ನಿರ್ದಿಷ್ಟವಾಗಿ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು (ಐಪಿಸಿ ಸೆಕ್ಷನ್-376) ಘೋಷಿಸಿದ್ದಾರೆ ಎಂಬ ಅಂಶ ವರದಿಯಲ್ಲಿದೆ.