ಕರ್ನಾಟಕ

karnataka

ETV Bharat / bharat

ಆಂಧ್ರದ 10ನೇ ತರಗತಿ ಪರೀಕ್ಷೆಗಳಲ್ಲಿ ಅಕ್ರಮ: 42 ಶಿಕ್ಷಕರ ಬಂಧನ

ಕೋವಿಡ್ ಕಾರಣಕ್ಕೆ 2 ವರ್ಷ ಆಂಧ್ರಪ್ರದೇಶದಲ್ಲಿ 10ನೇ ತರಗತಿ ಪರೀಕ್ಷೆಗಳು ನಡೆದಿರಲಿಲ್ಲ. ಈ ಬಾರಿ ಪರೀಕ್ಷೆಗಳು ನಡೆದಿದ್ದು, ಪರೀಕ್ಷಾ ಅಕ್ರಮ ಆರೋಪದಲ್ಲಿ 42 ಶಿಕ್ಷಕರನ್ನು ಬಂಧಿಸಲಾಗಿದೆ.

42 teachers arrested, suspended in AP over exam malpractices
ಆಂಧ್ರದ 10ನೇ ತರಗತಿ ಪರೀಕ್ಷೆಗಳಲ್ಲಿ ಅಕ್ರಮ: 42 ಶಿಕ್ಷಕರ ಬಂಧನ

By

Published : May 3, 2022, 10:37 AM IST

ಅಮರಾವತಿ(ಆಂಧ್ರಪ್ರದೇಶ): ಕರ್ನಾಟಕದ ಪೊಲೀಸ್ ಸಬ್​ ಇನ್ಸ್​ಪೆಕ್ಟರ್​ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದು, ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸಿದ್ದಕ್ಕಾಗಿ ಆಂಧ್ರಪ್ರದೇಶದ ವಿವಿಧ ಶಾಲೆಗಳ 42 ಶಿಕ್ಷಕರನ್ನು ಇದುವರೆಗೆ ಬಂಧಿಸಿ, ಅಮಾನತು ಮಾಡಲಾಗಿದೆ. ಎರಡು ವರ್ಷಗಳ ನಂತರ 10ನೇ ತರಗತಿಯ ಪರೀಕ್ಷೆಗಳು ನಡೆಯುತ್ತಿದ್ದು, ಹಿಂದಿನ ಎರಡು ವರ್ಷ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಏಪ್ರಿಲ್ 27ರಿಂದ ವಾರ್ಷಿಕ ಪರೀಕ್ಷೆಗಳು ಆರಂಭವಾಗಿವೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರೀಕ್ಷೆಗಳು ಆರಂಭವಾದ ಮೊದಲ ದಿನವೇ ಪರೀಕ್ಷಾ ಅವ್ಯವಹಾರವನ್ನು ಪತ್ತೆ ಹಚ್ಚಿದ್ದಾರೆ. ಪರೀಕ್ಷೆ ಆರಂಭವಾದ ಒಂದೂವರೆ ಗಂಟೆಯ ನಂತರ ಕರ್ನೂಲ್ ಜಿಲ್ಲೆಯಲ್ಲಿ ತೆಲುಗು ಪ್ರಶ್ನೆ ಪತ್ರಿಕೆಯ ಫೋಟೋ ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗಿದೆ. ಎರಡನೇ ದಿನ ಹಿಂದಿ ಪರೀಕ್ಷೆ ಮತ್ತು ಮೂರನೇ ದಿನ ಇಂಗ್ಲಿಷ್ ಪತ್ರಿಕೆಗಳು ಸತ್ಯ ಸಾಯಿ ಜಿಲ್ಲೆ, ಕರ್ನೂಲ್ ಜಿಲ್ಲೆ ಮತ್ತು ಇತರ ಜಿಲ್ಲೆಗಳಲ್ಲಿ ಅದೇ ರೀತಿಯಲ್ಲಿ ವೈರಲ್ ಆಗಿವೆ.

ಈ ಎಲ್ಲಾ ಪ್ರಕರಣಗಳಲ್ಲಿ ಕೆಲವು ಶಿಕ್ಷಕರ ಕೈವಾಡವನ್ನು ನಾವು ತಕ್ಷಣ ಪತ್ತೆಹಚ್ಚಿದ್ದೇವೆ. ಶಿಕ್ಷಕರು ಮೊದಲಿಗೆ ಹೊರಗಿನವರು ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿದ್ದೇವೆ ಎಂಬ ವದಂತಿಯನ್ನು ಹರಡಿದ್ದರು. ಆದರೆ ತನಿಖೆ ಮೂಲಕ ಶಿಕ್ಷಕರೇ ಈ ಕೃತ್ಯದಲ್ಲಿ ತೊಡಗಿಕೊಂಡಿರುವುದು ಗೊತ್ತಾಗಿದೆ. ಆದರೆ ಈ ಕುರಿತು ಶಿಕ್ಷಣಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಆತಂಕಗಳನ್ನು ಸೃಷ್ಟಿಸಲು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಗಳನ್ನು ಹರಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳು, ಪೊಲೀಸರೊಂದಿಗೆ ಸೇರಿ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಲು ಎಪಿ ಪಬ್ಲಿಕ್ ಎಕ್ಸಾಮಿನೇಷನ್ಸ್ ಕಾಯ್ದೆ-1997 ಅನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಶಿಕ್ಷಕರನ್ನು ಬಂಧಿಸಲಾಗಿದೆ. 25 ವರ್ಷಗಳ ಹಿಂದೆ ಕಾನೂನು ಜಾರಿಗೆ ಬಂದರೂ, ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿರುವುದು ಇದೇ ಮೊದಲು. ನಾವು ಇದುವರೆಗೆ ವಿವಿಧ ಜಿಲ್ಲೆಗಳಲ್ಲಿ 42 ಶಿಕ್ಷಕರನ್ನು ಬಂಧಿಸಿ, ಅಮಾನತು ಮಾಡಿದ್ದೇವೆ ಎಂದು ಮತ್ತೊಬ್ಬ ಶಿಕ್ಷಣಾಧಿಕಾರಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶದ ಶಾಲಾ ಶಿಕ್ಷಣ ಆಯುಕ್ತ ಎಸ್.ಸುರೇಶ್ ಕುಮಾರ್ ಪರೀಕ್ಷಾ ವೀಕ್ಷಕರು ಮತ್ತು ಪರೀಕ್ಷಾ ಕರ್ತವ್ಯಕ್ಕಾಗಿ ನಿಯೋಜನೆ ಮಾಡಿದ ವ್ಯಕ್ತಿಗಳು ಮೊಬೈಲ್​ ಫೋನ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರಶ್ನೆ ಪತ್ರಿಕೆಯ ಛಾಯಾಚಿತ್ರ ತೆಗೆದು ಇತರರಿಗೆ ರವಾನಿಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ನೀರು ಪೂರೈಕೆಯಂತಹ ಕೆಲಸಗಳಿಗೆ ವಿದ್ಯಾರ್ಥಿಗಳು ಮತ್ತು ಇತರ ಹೊರಗಿನವರನ್ನು ನಿಯೋಜಿಸಲಾಗುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುವ ಪ್ರಯತ್ನಗಳು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದಿದ್ದಾರೆ.

ಶಿಕ್ಷಕ ವೃತ್ತಿಯು ಶ್ರೇಷ್ಠ ವೃತ್ತಿಯಾಗಿದ್ದು, ಶಿಕ್ಷಕರು ಸಮಾಜದಲ್ಲಿ ಮಾದರಿಯಾಗಬೇಕು. ಕೆಲವು ಶಿಕ್ಷಕರ ಇಂತಹ ನಾಚಿಕೆಗೇಡಿನ ಕೃತ್ಯಗಳು ಶಿಕ್ಷಕ ಸಮುದಾಯಕ್ಕೆ ಮಾತ್ರವಲ್ಲದೆ ಶಿಕ್ಷಣ ಇಲಾಖೆಗೆ ಮತ್ತು ಇಡೀ ರಾಜ್ಯಕ್ಕೆ ಕಳಂಕ ತರುತ್ತಿವೆ. ಇದು ಎಲ್ಲಾ ಸಂಕಷ್ಟಗಳ ನಡುವೆಯೂ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ನೈತಿಕ ಸ್ಥೈರ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಕಲಬುರಗಿಯ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ, ಮತ್ತೋರ್ವನ ಬಂಧನ

ABOUT THE AUTHOR

...view details