ಗುವಾಹಟಿ (ಅಸ್ಸಾಂ): ದೇಶದಲ್ಲಿ ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿ ಕಾಡುತ್ತಿದ್ದು, ನಿರ್ಮೂಲನೆಗೆ ಅಸ್ಸೋಂ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದರ ವಿರುದ್ಧ ಬಹುದೊಡ್ಡ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಕೈಗೊಂಡಿದೆ. ಕೇವಲ ಹತ್ತೇ ದಿನಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಸ್ಸಾಂನಲ್ಲಿ 14 ವರ್ಷದೊಳಗಿನ ಬಾಲಕಿಯರನ್ನು ಮದುವೆಯಾಗುವ ಪುರುಷರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಬಂಧಿಸುವ ಬಗ್ಗೆ ಜನವರಿ 23ರಂದು ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿತ್ತು. ಇದರ ನಂತರದಲ್ಲಿ ರಾಜ್ಯಾದ್ಯಂತ ನಡೆದ ಬಾಲ್ಯ ವಿವಾಹಗಳನ್ನು ಪತ್ತೆ ಹಚ್ಚಿ ಮೊಕದ್ದಮೆ ಹೂಡುವ ಕಾರ್ಯಾಚರಣೆಯನ್ನು ಸರ್ಕಾರ ಚುರುಕುಗೊಳಿಸಿದೆ. ಈ ಬಗ್ಗೆ ಖುದ್ದು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಾಳೆಯಿಂದಲೇ ಕಾನೂನು ಕ್ರಮ: ಅಸ್ಸಾಂ ಸರ್ಕಾರ ಬಾಲ್ಯ ವಿವಾಹ ಪಿಡುಗು ಕೊನೆಗೊಳಿಸಲು ದೃಢ ಸಂಕಲ್ಪ ಮಾಡಿದೆ. ಪೊಲೀಸರು ಬಾಲ್ಯ ವಿವಾಹಗಳ ಪತ್ತೆ ಕಾರ್ಯಾಚರಣೆ ನಡೆಸಿ ಈಗಾಗಲೇ 4,004 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳಲ್ಲಿ ನಾಳೆಯಿಂದಲೇ ಕಾನೂನು ಕ್ರಮ ಕೈಗೊಳ್ಳಲು ಶುರು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಶರ್ಮಾ ಪ್ರಕಟಿಸಿದ್ದಾರೆ. ಅಸ್ಸಾಂ 36 ಜಿಲ್ಲೆಗಳ ಪೈಕಿ ಧುಬ್ರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ಅತಿ ಕಡಿಮೆ ಎಂದರೆ ಹೈಲಕಂಡಿ ಜಿಲ್ಲೆಯಲ್ಲಿ ಕೇವಲ ಒಂದೇ ಪ್ರಕರಣ ದಾಖಲಾಗಿದೆ ಎಂದು ಪ್ರಕರಣಗಳ ಪಟ್ಟಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಜಿಲ್ಲಾವಾರು ಅಂಕಿ-ಅಂಶ:ಧುಬ್ರಿ ಜಿ್ಲೆ - 370, ಹೊಜೈ ಜಿಲ್ಲೆ - 255, ಉದಲ್ಗುರಿ ಜಿಲ್ಲೆ - 235, ಕಾಮ್ರೂಪ್ ಮೆಟ್ರೋಪಾಲಿಟನ್ ಜಿಲ್ಲೆ - 192, ಗೋಲ್ಪಾರಾ ಜಿಲ್ಲೆ - 157, ಬಜಾಲಿ ಜಿಲ್ಲೆ - 132, ಬಕ್ಸಾ ಜಿಲ್ಲೆ - 153, ಬಾರ್ಪೇಟಾ ಜಿಲ್ಲೆ - 81, ಬಿಸ್ವನಾಥ್ ಜಿಲ್ಲೆ - 98, ಬೊಂಗೈಗಾಂವ್ ಜಿಲ್ಲೆ - 123, ಕ್ಯಾಚಾರ್ ಜಿಲ್ಲೆ- 35, ಕ್ಯಾಚಾರ್ ಜಿಲ್ಲೆ - 75, ದರ್ರಾಂಗ್ ಜಿಲ್ಲೆ - 125, ಧೇಮಾಜಿ ಜಿಲ್ಲೆ - 101, ದಿಬ್ರುಗಢ ಜಿಲ್ಲೆಯಲ್ಲಿ 75 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ.
ದಿಮಾ ಹಸಾವೊ ಜಿಲ್ಲೆ - 24, ಮೊರಿಗಾಂವ್ ಜಿಲ್ಲೆ - 224, ಗೋಲಾಘಾಟ್ ಜಿಲ್ಲೆ - 62, ಜೋರ್ಹತ್ ಜಿಲ್ಲೆ - 25, ಕಮ್ರೂಪ್ ಜಿಲ್ಲೆ - 80, ಕರ್ಬಿ ಅಂಗ್ಲಾಂಗ್ ಜಿಲ್ಲೆ - 126, ಕರ್ಬಿ ಅಂಗ್ಲಾಂಗ್ ಜಿಲ್ಲೆ - 92, ಕೊಕ್ರಜಾರ್ ಜಿಲ್ಲೆ - 204, ಲಖಿಂಪುರ ಜಿಲ್ಲೆ - 32, ನಲ್ಬರಿ ಜಿಲ್ಲೆ- 171, ಸಾದಿಯಾ ಜಿಲ್ಲೆ - 85, ಶಿವಸಾಗರ್ ಜಿಲ್ಲೆ - 54, ಸೋನಿತ್‌ಪುರ ಜಿಲ್ಲೆ - 60, ದಕ್ಷಿಣ ಸಲ್ಮಾರಾ ಜಿಲ್ಲೆ - 145, ತಮುಲ್‌ಪುರ ಜಿಲ್ಲೆ - 110, ತಿನ್ಸುಕಿಯಾ ಜಿಲ್ಲೆ - 73, ಹಮ್ರೇನ್ ಜಿಲ್ಲೆ - 15 ಮತ್ತು ಹೈಲಕಂಡಿ ಜಿಲ್ಲೆಯಲ್ಲಿ ಒಂದು ಪ್ರಕರಣ ವರದಿಯಾಗಿದೆ.
ಎಚ್ಚರಿಕೆ ಕೊಟ್ಟಿದ್ದ ಸಿಎಂ:ಜನವರಿ 23ರಂದು ನಡೆದ ಸಚಿವ ಸಂಪುಟದಲ್ಲಿ ಬಾಲ್ಯ ವಿವಾಹಗಳ ಕುರಿತ ಮಹತ್ವದ ತೀರ್ಮಾನ ಕೈಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿಎಂ ಹಿಮಂತ್ ಬಿಸ್ವಾ ಶರ್ಮಾ, ರಾಜ್ಯದಲ್ಲಿ ಶೇ. 31ರಷ್ಟು ವಿವಾಹಗಳು ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಆಗುತ್ತಿವೆ. 2019-20ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶದ ಪ್ರಕಾರ ಶೇ.11.7ರಷ್ಟು ಹೆಣ್ಣು ಮಕ್ಕಳು ತಾಯ್ತನದ ಹೊರೆ ಹೊಂದಿದ್ದಾರೆ. ಜೊತೆಗೆ, ಹೆಚ್ಚುತ್ತಿರುವ ತಾಯಿ ಮತ್ತು ಮಗುವಿನ ಮರಣ ಪ್ರಮಾಣವೂ ಕಳವಳಕಾರಿಯಾಗಿದೆ. ಬಾಲ್ಯ ವಿವಾಹವಾದ ಪುರುಷರ ವಿರುದ್ಧ ಕಾನೂನು ಕ್ರಮ ಜರುಗಿಸುವಾಗಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ:ಅಪ್ರಾಪ್ತ ಹುಡುಗಿಯರ ವಿವಾಹವಾದ ಗಂಡಂದಿರಿಗೆ ಜೈಲು: ಅಸ್ಸಾಂ ಸಿಎಂ ಹಿಮಂತ್