ವಿಜಯವಾಡ(ಆಂಧ್ರಪ್ರದೇಶ):ಬೈಕ್ ಅಥವಾ ಕಾರು ಡ್ರೈವ್ ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರ ಕೈಗೆ ಜನ - ಸಾಮಾನ್ಯರು ಸಿಕ್ಕಿ ಬಿದ್ದಾಗ ಡ್ರೈವಿಂಗ್ ಲೈಸನ್ಸ್, ಇನ್ಸುರೆನ್ಸ್ ಸೇರಿದಂತೆ ಇನ್ನಿಲ್ಲದ ಪ್ರಶ್ನೆ ಕೇಳಿ ದಂಡ ಕಟ್ಟಿಸಿಕೊಳ್ಳುತ್ತಾರೆ. ಆದರೆ, ಪೊಲೀಸರ ಬಳಿಯೇ ಆ ಎಲ್ಲ ಡ್ಯಾಕುಮೆಂಟ್ ಇಲ್ಲದಿದ್ದಾಗ? ಇದೀಗ ತಿಳಿದು ಬಂದಿರುವ ಮಾಹಿತಿವೊಂದರ ಪ್ರಕಾರ ಆಂಧ್ರಪ್ರದೇಶದ ವಿಜಯವಾಡದಲ್ಲಿ ಬರೋಬ್ಬರಿ 400 ಪೊಲೀಸರ ಬಳಿ ಡ್ರೈವಿಂಗ್ ಲೈಸನ್ಸೇ ಇಲ್ಲವಂತೆ.
ಇದನ್ನ ನೋಡಿದಾಗ ಜನಸಾಮಾನ್ಯರಿಗೆ ಮಾತ್ರವೇ ರೂಲ್ಸ್ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ವಿಜಯವಾಡದಲ್ಲಿ ನಿತ್ಯ ನೂರಾರು ಪೊಲೀಸರು ಡ್ರೈವಿಂಗ್ ಲೈಸನ್ಸ್ ಇಲ್ಲದೇ ಬೈಕ್- ಕಾರು ಡ್ರೈವ್ ಮಾಡುತ್ತಿದ್ದಾರೆ. ಹೋಂ ಗಾರ್ಡ್ನಿಂದ ಹಿಡಿದು ಸಬ್ ಇನ್ಸ್ಪೆಕ್ಟರ್ವರೆಗೂ ಡ್ರೈವಿಂಗ್ ಲೈಸನ್ಸ್ ಹಿಂದಿಲ್ಲ. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಕಮಿಷನರ್ ಎಲ್ಲರಿಗೂ ಡೆಡ್ಲೈನ್ ನೀಡಿದ್ದು, ಅಷ್ಟರೊಳಗೆ ಲೈಸನ್ಸ್ ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.