ಉಚಿತ ಸೀರೆ ಧೋತಿ ವಿತರಣೆ ವೇಳೆ ತಳ್ಳಾಟ ತಿರುಪತ್ತೂರ್ (ತಮಿಳುನಾಡು): ಇಲ್ಲಿಯ ವಾಣಿಯಂಬಾಡಿಯ ಜಿನ್ನಾ ಸೇತುವೆ ಬಳಿ ಉಚಿತ ಸೀರೆ ಮತ್ತು ಧೋತಿಗಾಗಿ ಟೋಕನ್ ವಿತರಿಸುತ್ತಿದ್ದ ವೇಳೆ ತಳ್ಳಾಟ ನೂಕಾಟ ಏರ್ಪಟ್ಟು ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ವಲ್ಲಿಯಮ್ಮಾಳ್, ರಾಜತಿ, ನಾಗಮ್ಮಾಳ್, ಚಿನ್ನಮ್ಮಾಳ್ ಮೃತ ಮಹಿಳೆಯರು. ತೈಪೂಸಂ ಹಬ್ಬದ ಪ್ರಯುಕ್ತ ಖಾಸಗಿ ಸಂಸ್ಥೆಯೊಂದು ಉಚಿತ ಸೀರೆ ಮತ್ತು ಧೋತಿಗಳನ್ನು ನೀಡಲು ಟೋಕನ್ಗಳನ್ನು ಹಂಚಿಕೆ ಮಾಡುತಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಜನರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ ಟೋಕನ್ ಪಡೆದುಕೊಳ್ಳಲು ಸುಮಾರು 500ಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಈ ವೇಳೆ ತಳ್ಳಾಟ ಉಂಟಾಗಿದೆ.
ಇದರಿಂದ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಸುಮಾರು 15 ಮಹಿಳೆಯರಿಗೆ ಉಸಿರಾಟದ ತೊಂದರೆ ಉಂಟಾಗಿ ಸ್ಥಳದಲ್ಲೇ ಮೂರ್ಛೆ ಹೋಗಿದ್ದಾರೆ. ಅವರನ್ನು ಕೂಡಲೇ ಚಿಕಿತ್ಸೆಗೆಂದು ಸ್ಥಳೀಯ ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. 15 ಜನರಲ್ಲಿ ನಾಲ್ವರು ಮಹಿಳೆಯರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಲ್ಲದೇ ಉಳಿದ 10 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಬಾಲಕೃಷ್ಣ ಅವರು ಆಗಮಿಸಿ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಟೋಕನ್ ವಿತರಣೆ ಮಾಡಿದ್ದ ಖಾಸಗಿ ಸಂಸ್ಥೆಯ ಮಾಲೀಕ ಅಯ್ಯಪ್ಪನ್ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಣಿಯಂಬಾಡಿ ತಹಶೀಲ್ದಾರ್ ಸಂಪತ್ ಮತ್ತು ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ತೈಪೂಸಂ ಹಬ್ಬದ ನಿಮಿತ್ತ ಖಾಸಗಿ ಸಂಸ್ಥೆಯ ಅಯ್ಯಪ್ಪನ್ ಎನ್ನುವವರು ಉಚಿತ ಸೀರೆ ಮತ್ತು ಧೋತಿ ಹಂಚಿಕೆ ಮಾಡಲು ಟೋಕನ್ಗಳನ್ನು ವಿತರಣೆ ಮಾಡುತ್ತಿದ್ದರು. ಟೋಕ್ನಗಳನ್ನು ಪಡೆಯಲು ಜಮಾಯಿಸಿದ್ದ ವೇಳೆ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಜನರ ಮಧ್ಯ ಸಿಲುಕಿದ್ದವರಲ್ಲಿ ನಾಲ್ಕು ಜನರು ಉಸಿರಾಟದ ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಉಡುಗೊರೆ ವಿತರಣೆ ವೇಳೆ ಕಾಲ್ತುಳಿತ:ಇನ್ನು ಕಳೆದ ತಿಂಗಳು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಬಡವರಿಗೆ ಸಂಕ್ರಾಂತಿ ನಿಮಿತ್ತ ಉಡುಗೊರೆ ವಿತರಣೆ ಮಾಡುತ್ತಿತ್ತು. ಈ ವೇಳೆ ಕಾಲ್ತುಳಿತ ಉಂಟಾಗಿ ಮೂವರು ಮಹಿಳೆಯರು ಮೃತಪಟ್ಟಿದ್ದರು. ಅಲ್ಲದೇ ಇನ್ನೂ ಕೆಲವರು ಗಾಯಗೊಂಡಿದ್ದರು.
ಮೃತರಿಗೆ ಟಿಡಿಪಿ ನಾಯಕ ಚಂದ್ರಬಾಬು ಪಕ್ಷದ ಪರವಾಗಿ ರೂಪಾಯಿ 5 ಲಕ್ಷ ರೂ ಪರಿಹಾರ ಪ್ರಕಟಿಸಿದ್ದರು. ಅಲ್ಲದೇ ಘಟನೆಗೆ ಸಿಎಂ ಜಗನ್ ಕೂಡ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದ್ದರು. ಟಿಡಿಪಿಯ ಮತ್ತೊಬ್ಬ ನಾಯಕ ಕೊವೆಲಮುಡಿ ರವೀಂದ್ರ ಎನ್ನುವವರು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ರೂ.1 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ:ದೇವರ ದರ್ಶನದ ವೇಳೆ ಕಾಲ್ತುಳಿತ ಉಂಟಾಗಿ ಮೂವರು ಮಹಿಳೆಯರ ಸಾವು