ನವದೆಹಲಿ:ಸೋಮವಾರ ತಡರಾತ್ರಿ ದೆಹಲಿಯ ಸರೋಜಿನಿ ಬಾಬು ಮಾರ್ಕೆಟ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ಕು ಗಾರ್ಮೆಂಟ್ಸ್ ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, "ತಡರಾತ್ರಿ ಸರೋಜಿನಿ ಮಾರ್ಕೆಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದರಲ್ಲಿ ನಾಲ್ಕು ಗಾರ್ಮೆಂಟ್ಸ್ ಅಂಗಡಿಗಳು ಸುಟ್ಟುಹೋಗಿವೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಅಲ್ಲದೇ ಘಟನೆಗೆ ಸೂಕ್ತ ಮಾಹಿತಿ ತಿಳಿದು ಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸುರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಸರೋಜಿನಿ ಬಾಬು ಮಾರ್ಕೆಟ್ ಶಾಪಿಂಗ್ಗೆ ಹೆಸರುವಾಸಿಯಾಗಿದೆ. ಇದು ಜನರಿಗೆ ಅತ್ಯುತ್ತಮ ಶಾಪಿಂಗ್ ತಾಣವೂ ಆಗಿದೆ. ಬಟ್ಟೆಯಿಂದ ಹಿಡಿದು ಶೂಗಳು, ಪಾದರಕ್ಷೆಗಳು ಎಲ್ಲವೂ ಇಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತವೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಇನ್ನು ಹೊರ ರಾಜ್ಯದಿಂದ ಆಗಮಿಸಿರುವವರು ಈ ಮಾರ್ಕೆಟ್ಗೆ ಭೇಟಿ ನೀಡಿ ತಮ್ಮಿಷ್ಟದ ಉಡುಗೆಗಳನ್ನು ಖರೀದಿ ಮಾಡುತ್ತಾರೆ. ಇನ್ನು ಪ್ರತಿ ಸೋಮವಾರ ಸರೋಜಿನಿ ಮಾರ್ಕೆಟ್ ಮುಚ್ಚಿರುತ್ತದೆ.
ಇದನ್ನೂ ಓದಿ:400 ಅಂಗಡಿಗಳಿದ್ದ ಕಾಂಪ್ಲೆಕ್ಸ್‌ನಲ್ಲಿ ಭಾರಿ ಅಗ್ನಿ ಅವಘಡ; ನಾಲ್ವರು ಯುವತಿಯರು ಸೇರಿ 6 ಸಾವು
ಇತ್ತೀಚೆಗೆ ಹೈದರಾಬಾದ್ನಸಿಕಂದರಾಬಾದ್ನಲ್ಲಿ ನಡೆದ ಅಗ್ನಿದುರಂತದಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದರು. ಇಲ್ಲಿಯ ಪ್ಯಾರಡೈಸ್ ಬಳಿಯ ಸ್ವಪ್ನಲೋಕ ಎಂಬ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆ 8 ಮಹಡಿಗಳಿಗೆ ವ್ಯಾಪಿಸಿತ್ತು. ಈ ಬಹುಮಹಡಿ ಕಟ್ಟಡದಲ್ಲಿ ಕಂಪ್ಯೂಟರ್ ಸಂಸ್ಥೆಗಳು, ಬಟ್ಟೆ ಅಂಗಡಿಗಳು, ಕಾಲ್ ಸೆಂಟರ್‌ಗಳು ಮತ್ತು ಇತರ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಈ ಕಾರ್ಯ ನಿರ್ವಹಿಸುತ್ತಿದ್ದವು. ಈ ವೇಳೆ 15ಕ್ಕೂ ಹೆಚ್ಚು ಮಂದಿ ಕಟ್ಟಡದಲ್ಲಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೆಲವರನ್ನು ರಕ್ಷಿಸಿದ್ದರು. ಅದರಲ್ಲಿ ಆರು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ಕಂಡು ಬಂದಿತ್ತು. ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ವೆನ್ನೆಲ, ಪ್ರಮೀಳಾ, ತ್ರಿವೇಣಿ, ಶ್ರಾವಣಿ, ಹಾಗು ಶಿವ ಎನ್ನುವವರು ಮೃತಪಟ್ಟಿದ್ದರು.
ಸ್ವಪ್ನಲೋಕ ಸಂಕೀರ್ಣ ಎರಡು ಬ್ಲಾಕ್‌ಗಳಲ್ಲಿ 4 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿದೆ. ಇಲ್ಲಿ 400 ಅಂಗಡಿಗಳಿವೆ. ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಇಲ್ಲಿ ಜನಸಂದಣಿ ಇರುತ್ತದೆ. ಅಲ್ಲದೇ ಸುಮಾರು 3 ಸಾವಿರ ಜನರು ಈ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲ ಮಹಡಿಗಳಲ್ಲಿ 170 ಅಂಗಡಿಗಳಿವೆ. ಇನ್ನು ಘಟನೆಗೂ ಮುನ್ನ ಬಹುತೇಕ ಕಚೇರಿಗಳಿಂದ ಸಿಬ್ಬಂದಿಗಳು ನಿರ್ಗಮಿಸಿದ್ದರಿಂದ ಬಾರಿ ಪ್ರಮಾಣದ ಪ್ರಾಣಹಾನಿ ತಪ್ಪಿತ್ತು.
ಇದನ್ನೂ ಓದಿ:ನಾಗ್ಪುರ ಹಿಂಗಾನಾ MIDC ಕಂಪನಿಯಲ್ಲಿ ಬೆಂಕಿ ಅವಘಡ.. ಮೂವರು ಕಾರ್ಮಿಕರು ಸಾವು