ಬಾಲಸೋರ್(ಒಡಿಶಾ): ನಾಲ್ವರು ವಿಶೇಷಚೇತನ ಸಹೋದರಿಯರು ತಮ್ಮ ತಂದೆಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟು ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾದರಿಯಾದರು. ಈ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆಯಿತು.
ಬಾಲಸೋರ್ ಜಿಲ್ಲೆಯ ನಿಜಂಪುರ ಪಂಚಾಯತ್ ವ್ಯಾಪ್ತಿಯ ದುಮುಡಾ ಗ್ರಾಮದಲ್ಲಿ ಬೈಧರ್ ಜೆನಾ ಎಂಬುವರು ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದರು. ಮೃತರಿಗೆ ನಾಲ್ವರು ಹೆಣ್ಣುಮಕ್ಕಳಿದ್ದು, ನಾಲ್ವರೂ ಕೂಡ ವಿಶೇಷಚೇತನರಾಗಿದ್ದಾರೆ.
ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ವಿಶೇಷ ಚೇತನ ಹೆಣ್ಣುಮಕ್ಕಳು ಬೈಧರ್ ಜೆನಾ ಅವರ ಪುತ್ರಿಯರು ವಿಶೇಷಚೇತನರಾದ ಕಾರಣ ಯಾರೂ ಅವರನ್ನು ಮದುವೆಯಾಗಿಲ್ಲ. ಆರು ತಿಂಗಳ ಹಿಂದೆಯೇ ಬೈಧರ್ ಪತ್ನಿ ಹರಮಣಿ ಜೆನಾ ತೀರಿಕೊಂಡಿದ್ದರು. ಆ ನಂತರದಲ್ಲಿ ಬೈಧರ್ ಕೂಡಾ ಹಾಸಿಗೆ ಹಿಡಿದಿದ್ದರು. ನಿನ್ನೆ ಕುಟುಂಬಕ್ಕೆ ಆಸರೆಯಾಗಿದ್ದ ತಂದೆಯೂ ಮೃತಪಟ್ಟಿದ್ದು, ಅಪ್ಪನ ಅಂತ್ಯಕ್ರಿಯೆಯನ್ನು ಹೆಣ್ಣುಮಕ್ಕಳೇ ನೆರವೇರಿಸಿದರು.
ಪುರುಷ ಪ್ರಧಾನ ಸಮಾಜದಲ್ಲಿ ತಂದೆಯ ಅಂತ್ಯಕ್ರಿಯೆಯನ್ನು ಪುತ್ರಿಯರೇ ಮಾಡಿದ್ದು ಜಿಲ್ಲೆಯಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.