ಅನಂತಪುರ(ಆಂಧ್ರಪ್ರದೇಶ) : ಅನಂತಪುರ ಜಿಲ್ಲೆಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ನಾಲ್ವರು ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ.
ಕಳೆದ ಮಂಗಳವಾರ ಸಂಜೆ 7 ಗಂಟೆಗೆ ನಡೆದ ಆಮ್ಲಜನಕದ ಪೂರೈಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ನಾಲ್ಕು ದಿನಗಳ ಅವಧಿಯಲ್ಲಿ ಇದೇ ರೀತಿಯ ಮೂರು ಘಟನೆಗಳು ನಡೆದಿದ್ದರಿಂದ ಜಿಲ್ಲೆಯಾದ್ಯಂತ ಭೀತಿ ಎದುರಾಗಿದೆ. ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯ ಅಡ್ಡಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ.
ಅಲ್ಲದೇ ಆಸ್ಪತ್ರೆಯಲ್ಲಿ ಒಬ್ಬ ನರ್ಸ್ ಮಾತ್ರ 50 ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಘಟನೆಯ ನಂತರ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಶಾಸಕರು ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಇಲ್ಲಿನ ಶಾಸಕ ಅನಂತ ವೆಂಕಟರಾಮಿ ರೆಡ್ಡಿ, ಆಮ್ಲಜನಕ ಪೂರೈಕೆಯಲ್ಲಿನ ತಾಂತ್ರಿಕ ತೊಂದರೆಗಳಿಂದಾಗಿ ರೋಗಿಗಳು ಸಾವನ್ನಪ್ಪಿದ್ದಾರೆ.
ಕ್ಯಾನ್ಸರ್ ಆಸ್ಪತ್ರೆಯ ಅಧೀಕ್ಷಕರು ಮತ್ತು ವರಾಸಿ ಏಜೆನ್ಸಿಯ ಆಮ್ಲಜನಕ ಸ್ಥಾವರ ವ್ಯವಸ್ಥಾಪಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದರು.
ಮೇ 1 ರಂದು 15 ಕೊರೊನಾ ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದ ಸಾವನ್ನಪ್ಪಿದರು, ಮತ್ತು ಮತ್ತೆ ಮೇ 3 ರಂದು ಹಿಂದೂಪುರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ 8 ಕೊರೊನಾ ರೋಗಿಗಳು ಸಾವನ್ನಪ್ಪಿದರು.