ನವದೆಹಲಿ : ಭಾರತದಲ್ಲಿ ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು 37,697,022 ಸಂಖ್ಯೆಯ ಸೈಬರ್ ದಾಳಿ ದಾಳಿ ನಡೆದಿವೆ ಎಂದು ವರದಿ ತಿಳಿಸಿದೆ. ಅಂದರೆ ದಿನವೊಂದಕ್ಕೆ ದೇಶದಲ್ಲಿ 4,18,000 ಸೈಬರ್ ದಾಳಿಗಳಾಗಿವೆ. ಸೈಬರ್ ಸೆಕ್ಯುರಿಟಿ ಕಂಪನಿ ಫೋರ್ಟಿನೆಟ್ ಪ್ರಕಾರ, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಜಾಗತಿಕ ಕಂಪ್ಯೂಟರ್ ವೈರಸ್ ದಾಳಿಗಳ ಪೈಕಿ ಭಾರತದಲ್ಲಿಯೇ ಶೇ 5.81 ದಾಳಿಗಳು ನಡೆದಿವೆ.
2022 ರ ದ್ವಿತೀಯಾರ್ಧದಲ್ಲಿ ಡ್ರೈವ್ ಬೈ ಕಾಂಪ್ರಮೈಸ್ ಮೂಲಕ ಬಹುತೇಕ ಮಾಲ್ವೇರ್ ವೈರಸ್ ದಾಳಿಗಳು ನಡೆದಿವೆ. ಬಳಕೆದಾರರು ಆನ್ಲೈನ್ನಲ್ಲಿ ಬ್ರೌಸ್ ಮಾಡುತ್ತಿರುವಾಗ ಹ್ಯಾಕರ್ಸ್ ಬಳಕೆದಾರರ ಕಂಪ್ಯೂಟರ್ಗಳನ್ನು ಹ್ಯಾಕ್ ಮಾಡುತ್ತಾರೆ ಮತ್ತು ಬಳಕೆದಾರರು ಅಪಾಯಕಾರಿ ವೈರಸ್ ಪ್ರೊಗ್ರಾಮ್ಗಳನ್ನು ಡೌನ್ಲೋಡ್ ಮಾಡುವಂತೆ ಮಾಡುತ್ತಾರೆ ಎಂದು ವಿಶಾಕ್ ರಾಮನ್ ಹೇಳಿದರು. ಇವರು ಫೋರ್ಟಿನೆಟ್ ಕಂಪನಿಯ ಭಾರತ, ಸಾರ್ಕ್ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ. ಈ ಸುಧಾರಿತ ನಿರಂತರ ಸೈಬರ್‌ಕ್ರೈಮ್ ತಂತ್ರಗಳ ವಿರುದ್ಧ ರಕ್ಷಿಸಲು, ಅನುಮಾನಾಸ್ಪದ ಕ್ರಮಗಳನ್ನು ಪತ್ತೆಹಚ್ಚಲು ಮತ್ತು ವಿಸ್ತೃತ ದಾಳಿಯ ತಗ್ಗಿಸುವಿಕೆಗಾಗಿ ಎಲ್ಲಾ ಭದ್ರತಾ ಸಾಧನಗಳಲ್ಲಿ ನೈಜ ಸಮಯದಲ್ಲಿ ಮಶೀನ್ ಲರ್ನಿಂಗ್ ಚಾಲಿತ ಸಂರಕ್ಷಣಾ ಕ್ರಮಗಳ ಬಗ್ಗೆ ಗಮನಹರಿಸಬೇಕೆಂದು ಅವರು ಹೇಳಿದರು.
ಇದಲ್ಲದೆ, ಹ್ಯಾಕರ್ಸ್ ಯಾವಾಗಲೂ ದಾಳಿಯ ಪ್ರಯತ್ನಗಳಲ್ಲಿ ತಮ್ಮ ಬಳಿ ಅಸ್ತಿತ್ವದಲ್ಲಿರುವ ಹೂಡಿಕೆಗಳನ್ನು ಮತ್ತು ಜ್ಞಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ ಎಂದು ವರದಿ ಹೇಳಿದೆ. ಬಾಟ್‌ನೆಟ್ ಮತ್ತು ಮಾಲ್‌ವೇರ್ ಕೋಡ್ ಮರುಬಳಕೆಯ ಮೂಲಕ ಹ್ಯಾಕರ್ಸ್ಗಳು ಪರಿಣಾಮಕಾರಿ, ಕಡಿಮೆ ವೆಚ್ಚದ ದಾಳಿಯ ಮಾರ್ಗಗಳನ್ನು ಸಂಶೋಧಿಸುತ್ತಾರೆ. ಭಾರತದಲ್ಲಿ ಬಾಟ್‌ನೆಟ್‌ಗಳ ಒಟ್ಟು ಎಣಿಕೆ 204,554,825 ಆಗಿತ್ತು. ಇದು 2022 ರ 4ನೇ ತ್ರೈಮಾಸಿಕದಲ್ಲಿ ಪ್ರತಿದಿನ 2.2 ಮಿಲಿಯನ್ ಬಾಟ್‌ಗಳಷ್ಟಿತ್ತು. ಕಳೆದ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಎಣಿಸಲಾದ ಬಾಟ್‌ನೆಟ್‌ಗಳಲ್ಲಿ ಭಾರತವು ಶೇ 4.72 ರಷ್ಟನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.