ನವದೆಹಲಿ: ಆಧುನಿಕ ಭಾರತದ ಇತಿಹಾಸದಲ್ಲಿ ನಾಲ್ವರು ಗುಜರಾತಿಗಳು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಕೊಂಡಾಡಿದರು. ದೆಹಲಿ ಗುಜರಾತಿ ಸಮಾಜದ 125 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಗುಜರಾತಿ ಭಾಷೆಯಲ್ಲಿ ಮಾತನಾಡಿದ ಶಾ, "ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಮತ್ತು ನರೇಂದ್ರ ಮೋದಿ ಆಧುನಿಕ ಭಾರತದ ಇತಿಹಾಸದಲ್ಲಿಯೇ ಮಹತ್ವದ ಕೊಡುಗೆ ನೀಡಿದ್ದಾರೆ" ಎಂದು ತಿಳಿಸಿದರು.
"ಗಾಂಧೀಜಿಯವರ ಪ್ರಯತ್ನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಸರ್ದಾರ್ ಪಟೇಲ್ ಅವರಿಂದ ಒಗ್ಗೂಡಿತು, ಮೊರಾರ್ಜಿ ದೇಸಾಯಿ ಅವರಿಂದ ಪ್ರಜಾಪ್ರಭುತ್ವ ಪುನರುಜ್ಜೀವನಗೊಂಡಿತು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಭಾರತದ ಕೀರ್ತಿ ಪ್ರಪಂಚದಾದ್ಯಂತ ಹರಡುತ್ತಿದೆ. ಈ ನಾಲ್ವರು ಗುಜರಾತಿಗಳು ಶ್ರೇಷ್ಠ ಸಾಧನೆ ಮಾಡಿದ್ದಾರೆ ಮತ್ತು ಅವರು ಇಡೀ ರಾಷ್ಟ್ರದ ಹೆಮ್ಮೆ" ಎಂದರು.
ಪ್ರಧಾನಿ ಮೋದಿಯವರ ಒಂಬತ್ತು ವರ್ಷಗಳ ಅಧಿಕಾರಾವಧಿಯನ್ನು ಉಲ್ಲೇಖಿಸಿದ ಶಾ, "ಈ ಅವಧಿಯಲ್ಲಿ ದೇಶವು ಅನೇಕ ಸಾಧನೆಗಳನ್ನು ಮಾಡಿದೆ. 2014ರಲ್ಲಿ ಮೋದಿ ಪ್ರಧಾನಿಯಾದಾಗ ಭಾರತದ ಆರ್ಥಿಕತೆ ವಿಶ್ವದಲ್ಲಿ 11ನೇ ಸ್ಥಾನದಲ್ಲಿತ್ತು. 9 ವರ್ಷಗಳ ನಂತರ ಭಾರತದ ಆರ್ಥಿಕತೆ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಈಗ ಐಎಂಎಫ್ ಸೇರಿದಂತೆ ಹಲವು ಏಜೆನ್ಸಿಗಳು ಭಾರತದ ಆರ್ಥಿಕತೆಯನ್ನು ಪ್ರಕಾಶಮಾನವಾದ ತಾಣವಾಗಿ ನೋಡುತ್ತಿವೆ. "ಪ್ರಧಾನಿ ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ, ಸರ್ಜಿಕಲ್ ಮತ್ತು ವೈಮಾನಿಕ ದಾಳಿಗಳನ್ನು ನಡೆಸುವ ಮೂಲಕ ಭಾರತದ ಗಡಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದೆ". ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರ: 130 ಕೋಟಿ ಜನರಿರುವ ಭಾರತದಂತಹ ವಿಶಾಲ ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಸುಗಮ ರೀತಿಯಲ್ಲಿ ಪೂರ್ಣಗೊಳಿಸಲಾಗಿದೆ. ಮೋದಿಯವರ ನಾಯಕತ್ವದಲ್ಲಿ ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿದೆ. ಸ್ಟಾರ್ಟಪ್‌ಗಳ ಕ್ಷೇತ್ರದಲ್ಲಿ 3ನೇ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದೆ.