ಗುವಾಹಟಿ, ಅಸ್ಸೋಂ: ನಗರದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಭೂಮಿ ಕಂಪಿಸಿರುವುದರ ಬಗ್ಗೆ ವರದಿಯಾಗಿದೆ. ಭೂಕಂಪನವು ರಿಕ್ಟರ್ ಮಾಪಕದಲ್ಲಿ 4.8 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಗುವಾಹಟಿ ನಗರದ ಜನತೆಗೆ ಶುಕ್ರವಾರ ಬೆಳಗ್ಗೆ 10.16 ಗಂಟೆಗೆ ಸುಮಾರಿಗೆ ಭೂಕಂಪನದ ಅನುಭವವಾಗಿದೆ ಎಂದು ಮಾಹಿತಿ ನೀಡಿದೆ.
ಭೂಕಂಪದ ಕೇಂದ್ರ ಬಿಂದು ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶದ 70 ಕಿಮೀ ಆಳದಲ್ಲಿ ಕಂಡು ಬಂದಿದೆ. 20 ಸೆಕೆಂಡುಗಳ ಕಾಲ ಭೂಮಿ ನಡುಗಿದ್ದು, ಕಂಪನವು ಮುಖ್ಯವಾಗಿ ಅಸ್ಸೋಂನ ಗುವಾಹಟಿ ಮತ್ತು ಈಶಾನ್ಯ ಪ್ರದೇಶದ ಇತರ ಭಾಗದ ಜನತೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಳೆದ ವಾರ ಅಸ್ಸೋಂನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರವು ತೇಜ್‌ಪುರದ ಪಶ್ಚಿಮಕ್ಕೆ 39 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಪತ್ತೆಯಾಗಿತ್ತು.
ವಾರದ ಹಿಂದೆ ಸಂಭವಿಸಿದ್ದ ಭೂಕಂಪ: ತೇಜ್‌ಪುರ ಜನತೆಗೆ ಭಾನುವಾರ ರಾತ್ರಿ 11.35ಕ್ಕೆ ಭೂಕಂಪದ ಅನುಭವವಾಗಿತ್ತು. ಭೂಕಂಪವು ರಿಕ್ಟರ್ ಮಾಪಕದಲ್ಲಿ 3.6 ರಷ್ಟು ದಾಖಲಾಗಿತ್ತು. ಸೋನಿತ್‌ಪುರ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿತ್ತು ಎಂದು ಹವಾಮಾನ ಕಚೇರಿ ತಿಳಿಸಿತ್ತು.
ನಾಲ್ಕನೇ ಬಾರಿ ಕಂಪಿಸಿದ ಭೂಮಿ: ರಾಜ್ಯದಲ್ಲಿ ಶನಿವಾರ ರಾತ್ರಿಯಿಂದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 20 ದಿನಗಳಲ್ಲಿ 4 ಬಾರಿ ಭೂಕಂಪನದ ಅನುಭವವಾಗಿದೆ. ಅಷ್ಟೇ ಅಲ್ಲ ಕೆಲ ದಿನಗಳ ಹಿಂದೆ ನೆರೆಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು.