ಅಂಡಮಾನ್ ಮತ್ತು ನಿಕೋಬಾರ್: ಭಾನುವಾರ ಮಧ್ಯಾಹ್ನದಿಂದ ಸೋಮವಾರ ನಸುಕಿನ ಜಾವದವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 6 ಬಾರಿ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಭೂಕಂಪನದಿಂದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.
ಸೋಮವಾರ ನಸುಕಿನ ಜಾವದಲ್ಲಿ ನಡುಗಿದ ಭೂಮಿ:ಇಲ್ಲಿನ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ನಸುಕಿನ ಜಾವ 2.26 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಕ್ಯಾಂಪ್‌ಬೆಲ್ ಕೊಲ್ಲಿಯ ಉತ್ತರದಿಂದ 220 ಕಿಲೋ ಮೀಟರ್ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದು, 32 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ. 4.6ರಷ್ಟು ತೀವ್ರತೆಯ ಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ಟ್ವೀಟ್ ಮಾಡುವ ಮೂಲಕ ತಿಳಿಸಿದೆ.
ಒಂದು ಗಂಟೆ ಮುನ್ನ ಕಂಪಿಸಿದ್ದ ಭೂಮಿ:ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ಭೂಕಂಪ ಸಂಭವಿಸುವ ಒಂದು ಗಂಟೆ ಮುನ್ನ ಅಂಡಮಾನ್ನ ಡಿಗ್ಲಿಪುರ್ ಎಂಬಲ್ಲಿ ಭೂಮಿ ಕಂಪಿಸಿತ್ತು. ನಸುಕಿನ ಜಾವ 1.07 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಡಿಗ್ಲಿಪುರ್ ಪೂರ್ವದಿಂದ ಸುಮಾರು 34 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದು, 15 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.3.9ರಷ್ಟು ತೀವ್ರತೆಯ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ.
ಐದು ಗಂಟೆ ಅವಧಿಯಲ್ಲಿ ನಾಲ್ಕು ಬಾರಿ ಭೂಕಂಪ:ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಐದು ಗಂಟೆಗಳ ಅವಧಿಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿರುವುದರ ಬಗ್ಗೆ ವರದಿಯಾಗಿದೆ. ಭಾನುವಾರ ನಿಕೋಬಾರ್ ದ್ವೀಪದಲ್ಲಿ ಸಂಜೆ 5.47ಕ್ಕೆ ಸುಮಾರು 37 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.5.5ರಷ್ಟು ತೀವ್ರತೆಯ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.