ನವದೆಹಲಿ: ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ನಲ್ಲಿರುವ ಕ್ಲಿನಿಕ್ನಲ್ಲಿ 45 ವರ್ಷದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಾಜಿ ತಂತ್ರಜ್ಞನಾಗಿದ್ದ ಆರೋಪಿ ಡಾ. ಮಹೇಂದ್ರ ನಕಲಿ ಎಂಬಿಬಿಎಸ್ ಪದವಿ ಪಡೆದು ಗ್ರೇಟರ್ ಕೈಲಾಶ್ - 1ರ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮಹೇಂದ್ರ ಜೊತೆಗೆ ಎಂಬಿಬಿಎಸ್ ಪಡೆದಿರುವುದಾಗಿ ನಕಲಿ ಸರ್ಟಿಫಿಕೇಟ್ ಹೊಂದಿದ್ದ ಕ್ಲಿನಿಕ್ ಮಾಲೀಕ ಡಾ. ನೀರಜ್ ಅಗರ್ವಾಲ್ ಹಾಗೂ ಇತರ ಇಬ್ಬರು ಸಿಬ್ಬಂದಿಗಳಾದ ಡಾ. ಪೂಜಾ ಅಗರ್ವಾಲ್ ಹಾಗೂ ಡಾ. ಜೈಪ್ರೀತ್ ಅವರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳಿಂದ ಸರ್ಟಿಫಿಕೇಟ್ಗಳನ್ನು ಪಡೆದಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವಾರದ ಹಿಂದೆ ಸಣ್ಣ ಆರೋಗ್ಯ ಸಮಸ್ಯೆ ಎಂದು ಈ ಆಸ್ಪತ್ರೆಗೆ ರೋಗಿಯೊಬ್ಬರು ದಾಖಲಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ಆ ವ್ಯಕ್ತಿ ಸಾವನ್ನಪ್ಪಿದ್ದರು. ರೋಗಿಯ ಕುಟುಂಬಸ್ಥರು ಆಸ್ಪತ್ರೆ ವೈದ್ಯರ ವಿರುದ್ಧ ಪ್ರತಿಭಟಿಸಿದ್ದರು. ಈ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಪ್ರತಿಭಟನೆ ವೇಳೆ, ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೃತನ ಕುಟುಂಬಸ್ಥರನ್ನು ಸಮಾಧಾನಗೊಳಿಸಿ, ಅವರಿಂದ ದೂರು ಪಡೆದು ತನಿಖೆ ಆರಂಭಿಸಿದ್ದಾರೆ. ಈ ನಾಲ್ವರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ರೋಗಿಯ ಮನೆಯವರು ಆರೋಪಿಸಿದ್ದರು. ಈ ವೈದ್ಯಕೀಯ ಕೇಂದ್ರದ ವಿರುದ್ಧ ಈಗಾಗಲೇ, ಈ ರೀತಿಯ ನಕಲಿ ವೈದ್ಯರು ನೀಡಿದ ಅಸಮರ್ಪಕ ಚಿಕಿತ್ಸೆಯಿಂದ ರೋಗಿಗಳು ಸಾವನ್ನಪ್ಪಿರುವ ಬಗ್ಗೆ ಅನೇಕ ದೂರುಗಳು ಬಂದಿವೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.