ಡೆಹ್ರಾಡೂನ್(ಉತ್ತರಾಖಂಡ):ಉತ್ತರಾಖಂಡದಲ್ಲಿ ಇತ್ತೀಚೆಗೆ ಸರಣಿ ಎಂಬಂತೆ ಅಪಘಾತಗಳು ಸಂಭವಿಸಿವೆ. ರಸ್ತೆಗಳ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಂದಾಗಿ ಸರ್ಕಾರ ಮತ್ತು ಆಡಳಿತದ ವೈಫಲ್ಯವನ್ನು ಎತ್ತಿ ತೋರುವಂತಾಗಿದೆ.
ಉತ್ತರಕಾಶಿಯಲ್ಲಿ 26 ಮಂದಿ ಸಾವು: ಇತ್ತೀಚೆಗಷ್ಟೇ ಉತ್ತರಾಖಂಡದ ಅತಿದೊಡ್ಡ ಅಪಘಾತವೊಂದು ನಡೆದಿತ್ತು. ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಏಕಕಾಲದಲ್ಲಿ 26 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಮಧ್ಯಪ್ರದೇಶದ ಪನ್ನಾ ಮೂಲದರಾಗಿದ್ದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ವತಃ ಉತ್ತರಾಖಂಡಕ್ಕೆ ಆಗಮಿಸಿ ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದರು.
ತೆಹ್ರಿಯಲ್ಲಿ 6 ಜನರ ಸಾವು: ಉತ್ತರಕಾಶಿ ರಸ್ತೆ ಅಪಘಾತದಿಂದ ಜನ ತುಸು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನುತ್ತಿರುವಾಗಲೇ ತೆಹ್ರಿಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಇದರಲ್ಲಿ ಐವರು ಏಕಕಾಲದಲ್ಲಿ ಸಾವನ್ನಪ್ಪಿದ್ದರು. ಎಲ್ಲರೂ ಕಾರಿನಲ್ಲಿದ್ದು, ಕಾರು ಹಳ್ಳಕ್ಕೆ ಬಿದ್ದಿತ್ತು. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದರು. ಅದೇ ದಿನ ತೆಹ್ರಿಯಲ್ಲೇ ಮತ್ತೊಂದು ರಸ್ತೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಒಬ್ಬರು ಸಾವನ್ನಪ್ಪಿದರು. ಜೂನ್ 3 ರಂದು ಮತ್ತೊಂದು ಅಪಘಾತ ಕೂಡಾ ವರದಿಯಾಗಿತ್ತು.
ಓದಿ:ಕಂದಕಕ್ಕೆ ಉರುಳಿ ಬಿದ್ದ ಕಾರು: ಐವರು ಪ್ರಯಾಣಿಕರ ದುರ್ಮರಣ, ಓರ್ವ ಗಾಯ
ಡೆಹ್ರಾಡೂನ್ ಮತ್ತು ಹರಿದ್ವಾರ ಅಪಘಾತಗಳು: ಉತ್ತರಕಾಶಿ ಮತ್ತು ತೆಹ್ರಿ ನಂತರ, ಜೂನ್ 7, 8, ಮತ್ತು 9 ರಂದು ಡೆಹ್ರಾಡೂನ್‌ನ ವಿವಿಧ ಸ್ಥಳಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿದ್ದವು. ಈ ಅಪಘಾತಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಮಾತ್ರವಲ್ಲದೇ ಹರಿದ್ವಾರದಲ್ಲಿ ಜೂನ್ 6 ರಿಂದ 9 ರ ನಡುವೆ ವಿವಿಧ ರಸ್ತೆ ಅಪಘಾತಗಳಲ್ಲಿ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೇ, ಜೂನ್ 9 ರಂದು ಪೌರಿ ಜಿಲ್ಲೆಯಲ್ಲಿ ಕಾರು ಹಳ್ಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.
ಜೂನ್ ದುರಂತ:ಜೂನ್ ಮೊದಲ ವಾರ ಉತ್ತರಾಖಂಡಕ್ಕೆ ಕರಾಳ ತಿಂಗಳವಾಗಿ ಮಾರ್ಪಟ್ಟಿದೆ. ರಸ್ತೆ ಅಪಘಾತದಿಂದ ಗರ್ವಾಲ್ ಮಾತ್ರವಲ್ಲ ಕುಮೌನ್ ಕೂಡ ತತ್ತರಿಸಿದೆ. ಕುಮಾನ್‌ನಲ್ಲಿಯೂ ಕಳೆದ ಮೂರು ದಿನಗಳಲ್ಲಿ ಅನೇಕ ರಸ್ತೆ ಅಪಘಾತಗಳು ಸಂಭವಿಸಿವೆ. ಜೂನ್ 6 ರಂದು ಚಂಪಾವತ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ವರ್ಷ ಇದುವರೆಗೆ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ರಸ್ತೆ ಅಪಘಾತಗಳು ಚಂಪಾವತ್‌ನಲ್ಲಿ ಸಂಭವಿಸಿವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಚಂಪಾವತ್‌ನಲ್ಲಿ ಐದು ತಿಂಗಳ ಅವಧಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ನೈನಿತಾಲ್‌ನಲ್ಲಿ ಐವರ ಸಾವು: ನಿನ್ನೆಯಷ್ಟೇ ನೈನಿತಾಲ್‌ನಲ್ಲಿ ಕಾರೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಗಾಯಗೊಂಡಿದ್ದರು. ಒಟ್ಟಾರೆಯಾಗಿ ಉತ್ತರಕಾಶಿ, ತೆಹ್ರಿ, ನೈನಿತಾಲ್ ಮತ್ತು ಚಂಪಾವತ್‌ನಲ್ಲಿ ಮೂರು ದಿನಗಳಲ್ಲಿ 40 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅಂದರೆ ಪ್ರತಿ ಎರಡು ಗಂಟೆಗೊಮ್ಮೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾನೆ.
ಕಡತಗಳಲ್ಲಿ ದೂಳು ಸೇರುತ್ತಿರುವ ತನಿಖೆ: ಉತ್ತರಾಖಂಡದಲ್ಲಿ ಈವರೆಗೆ ಭಾರಿ ರಸ್ತೆ ಅಪಘಾತಗಳು ನಡೆದಿದ್ದು, ಎಲ್ಲ ಘಟನೆಗಳನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಲಾಗಿದೆ. ಉತ್ತರಕಾಶಿ ರಸ್ತೆ ಅಪಘಾತದಲ್ಲಿ 26 ಮಂದಿ ಸಾವನ್ನಪ್ಪಿದ ನಂತರವೂ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಆದರೆ ಇವು ನಂತರ ಏನಾಗುತ್ತದೆ ಎಂಬುದು ಗೊತ್ತಾಗಲ್ಲ.