ಕರ್ನಾಟಕ

karnataka

ಯೂಟ್ಯೂಬ್​​ನಲ್ಲಿ ದಿನಕ್ಕೆ 4 ಕೋಟಿ ಸ್ಟ್ರೀಮಿಂಗ್: ಅಲ್ಕಾ ಯಾಗ್ನಿಕ್ ವಿಶ್ವ ದಾಖಲೆ

By

Published : Jan 30, 2023, 3:59 PM IST

2022 ರ ಯೂಟ್ಯೂಬ್ ಗ್ಲೋಬಲ್ ಶ್ರೇಯಾಂಕಗಳಲ್ಲಿ ಭಾರತೀಯ ಗಾಯಕಿ ಅಲ್ಕಾ ಯಾಗ್ನಿಕ್ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದಾರೆ. ಪ್ರತಿದಿನ ಸುಮಾರು 4 ಕೋಟಿ ಬಾರಿ ವೀಕ್ಷಕರು ಅವರ ಹಾಡುಗಳನ್ನು ಸ್ಟ್ರೀಮ್ ಮಾಡಿದ್ದಾರೆ.

Alka Yagnik song is heard four crore times every day
Alka Yagnik song is heard four crore times every day

ಇಲ್ಲಿಯವರೆಗೆ ಸಂಗೀತ ಪ್ರಪಂಚದ ಎಲ್ಲಾ ದಾಖಲೆಗಳು BTS, ಬ್ಲ್ಯಾಕ್‌ಪಿಂಕ್ ಬ್ಯಾಂಡ್ ಮತ್ತು ಟೇಲರ್ ಸ್ವಿಫ್ಟ್ ಹೆಸರಿನಲ್ಲಿವೆ. ಆದರೆ ಇದೀಗ ಭಾರತೀಯ ಗಾಯಕಿ ಅಲ್ಕಾ ಯಾಗ್ನಿಕ್ ಇವರನ್ನೆಲ್ಲ ಮೀರಿಸಿ ಸಂಗೀತ ಲೋಕದಲ್ಲಿ ತಮ್ಮದೇ ದಾಖಲೆ ಮಾಡಿದ್ದಾರೆ. ಅಲ್ಕಾ ಯಾಗ್ನಿಕ್ 2022 ರ ಯೂಟ್ಯೂಬ್ ಗ್ಲೋಬಲ್ ಶ್ರೇಯಾಂಕಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಹಾಡಿರುವ ಹಾಡುಗಳನ್ನು ದಿನಕ್ಕೆ ಸರಾಸರಿ 4.2 ಕೋಟಿ ಬಾರಿ ವೀಕ್ಷಿಸಲಾಗಿದೆ. 2021 ರಲ್ಲಿ ಅಭಿಮಾನಿಗಳು ಅವರ ಧ್ವನಿಯನ್ನು ಹದಿನೇಳು ನೂರು ಕೋಟಿ ಬಾರಿ ಕೇಳಿದ್ದಾರೆ. ಇದಕ್ಕೂ ಮುನ್ ಇಂಥ ದಾಖಲೆ ಯಾರೂ ಮಾಡಿಲ್ಲ. ಇದರೊಂದಿಗೆ ಅಲ್ಕಾ ಸತತ ಮೂರನೇ ಬಾರಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

14 ನೇ ವಯಸ್ಸಲ್ಲೇ ಹಾಡಲು ಆರಂಭಿಸಿದ ಗಾಯಕಿ:ಅಲ್ಕಾ ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಹಾಡಲು ಆರಂಭಿಸಿದ್ದರು. ಇವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತನ್ನ ಸುಮಧುರ ಕಂಠದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಅಲ್ಕಾ ಯಾಗ್ನಿಕ್ ಬಾಲಿವುಡ್‌ನ ಪ್ರಸಿದ್ಧ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತೇಜಾಬ್‌ ಚಿತ್ರದ 'ಏಕ್...ದೋ...ತೀನ್' ದಿಂದ ಚೈನಾ ಗೇಟ್‌ ಚಿತ್ರದ 'ಚಮ್ಮಾ ಚಮ್ಮಾ' ವರೆಗೆ ಸಿನಿಮಾ, ಆಲ್ಬಂ ಸೇರಿದಂತೆ ಅಲ್ಕಾ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಇವರು ಏಳು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಗೆದ್ದಿದ್ದಾರೆ. ಬಾಲಿವುಡ್ ಸಂಗೀತ ಉದ್ಯಮದಲ್ಲಿ ಇವರು ಹೆಚ್ಚಾಗಿ ಸೋಲೊ ಹಾಡುಗಳನ್ನು ಹಾಡಿದ್ದಾರೆ. ಕಳೆದ 2022 ನೇ ವರ್ಷದಲ್ಲಿ ಅವರು ಯೂಟ್ಯೂಬ್‌ನಲ್ಲಿ ಅತ್ಯಧಿಕ ಸ್ಟ್ರೀಮ್ ಮಾಡಲಾದ ಗಾಯಕಿ ಎಂಬ ಅಪರೂಪದ ಗೌರವ ಪಡೆದುಕೊಂಡಿದ್ದಾರೆ.

15.3 ಬಿಲಿಯನ್​ ಸಲ ಸ್ಟ್ರೀಮ್​​​​​:ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ವರದಿಯ ಪ್ರಕಾರ, ಅಲ್ಕಾ ಅವರ ಹಾಡುಗಳು 15.3 ಬಿಲಿಯನ್ ಬಾರಿ ಸ್ಟ್ರೀಮ್‌ ಆಗಿವೆ. ಇದು ದಿನಕ್ಕೆ ಸರಾಸರಿ 42 ಮಿಲಿಯನ್ ಸ್ಟ್ರೀಮ್‌ ಆಗುತ್ತದೆ. ಅವರು ಕಳೆದ ಎರಡು ವರ್ಷಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಕಾ 2021 ರಲ್ಲಿ 17 ಬಿಲಿಯನ್ ಸ್ಟ್ರೀಮ್‌ಗಳನ್ನು ಪಡೆದಿದ್ದರು ಮತ್ತು 2020 ರಲ್ಲಿ 16.6 ಬಿಲಿಯನ್ ಸ್ಟ್ರೀಮ್‌ಗಳನ್ನು ಹೊಂದಿದ್ದರು. 14.7 ಬಿಲಿಯನ್ ಸ್ಟ್ರೀಮ್‌ಗಳೊಂದಿಗೆ ಬ್ಯಾಡ್ ಬನ್ನಿ (Bad Bunny) ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಇನ್ನುಳಿದ ಎಲ್ಲರೂ ಭಾರತೀಯರೇ ಎಂಬುದು ಮತ್ತೊಂದು ವಿಶೇಷ. ಉದಿತ್ ನಾರಾಯಣ್ (10.8 ಬಿಲಿಯನ್), ಅರಿಜಿತ್ ಸಿಂಗ್ (10.7 ಬಿಲಿಯನ್) ಮತ್ತು ಕುಮಾರ್ ಸಾನು (9.09 ಬಿಲಿಯನ್) ನಂತರದ ಸ್ಥಾನಗಳಲ್ಲಿದ್ದಾರೆ.

ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಶ್ರೀದೇವಿ ಸೇರಿದಂತೆ ಖ್ಯಾತನಾಮ ತಾರೆಯರಿಗೆ ಅಲ್ಕಾ ಯಾಗ್ನಿಕ್ ಹಿನ್ನೆಲೆ ಗಾಯನ ಮಾಡಿದ್ದಾರೆ. ಅವರ ದೊಡ್ಡ ಹಿಟ್‌ಗಳಲ್ಲಿ ಪರದೇಸಿ ಪರದೇಸಿ, ಗಜಬ್ ಕಾ ಹೈ ದಿನ್, ತಾಲ್ ಸೆ ತಾಲ್ ಮಿಲಾ ಮತ್ತು ಇತ್ತೀಚಿನ ಅಗರ್ ತುಮ್ ಸಾಥ್ ಹೋ ಹಾಡುಗಳು ಸೇರಿವೆ.

ಕೋಲ್ಕತ್ತಾದ ಗುಜರಾತಿ ಕುಟುಂಬದಲ್ಲಿ ಜನಿಸಿದ ಅಲ್ಕಾ ಅವರ ತಂದೆ ಧರ್ಮೇಂದ್ರ ಶಂಕರ್ ಮತ್ತು ತಾಯಿ ಶುಭಾ. ತಾಯಿ ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿದ್ದುದರಿಂದ ಬಾಲ್ಯದಿಂದಲೇ ಅಲ್ಕಾಗೆ ಸಂಗೀತ ತರಬೇತಿ ನೀಡಿದರು. ಅಲ್ಕಾ ಆರನೇ ವಯಸ್ಸಿನಲ್ಲಿ ಆಕಾಶವಾಣಿಯಲ್ಲಿ ಹಾಡಿದಾಗ, ರಾಜ್ ಕಪೂರ್ ಅವರ ಧ್ವನಿಯಲ್ಲಿನ ಮಾಧುರ್ಯವನ್ನು ಗುರುತಿಸಿದ್ದರು ಮತ್ತು ಅವರನ್ನು ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್ ಅವರಿಗೆ ಶಿಫಾರಸು ಮಾಡಿದ್ದರು.

ಇದನ್ನೂ ಓದಿ: ಏಷ್ಯಾ-2020 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸಂಗೀತ ಮಾಂತ್ರಿಕನಿಗೆ ಮೊದಲ ಸ್ಥಾನ

ABOUT THE AUTHOR

...view details