ಕರ್ನಾಟಕ

karnataka

ETV Bharat / bharat

ಚೆನ್ನೈನ ಅವಡಿ ಬಳಿ ಹಳಿ ತಪ್ಪಿದ ವಿದ್ಯುತ್ ಚಾಲಿತ​ ರೈಲು: ತಪ್ಪಿದ ಭಾರಿ ದುರಂತ

ಚೆನ್ನೈನ ಅವಡಿ ರೈಲು ನಿಲ್ದಾಣದ ಬಳಿ ಇಂದು ಮುಂಜಾನೆ ವಿದ್ಯುತ್ ಚಾಲಿತ ರೈಲು ಹಳಿ ತಪ್ಪಿದೆ. ಅದೃಷ್ಟವಶಾತ್​ ಭಾರಿ ದುರಂತವೊಂದು ತಪ್ಪಿದೆ.

4 coaches of electric train derailed near Chennai Avadi
ಚೆನ್ನೈನ ಅವಡಿ ಬಳಿ ಹಳಿ ತಪ್ಪಿದ ವಿದ್ಯುತ್ ಚಾಲಿತ​ ರೈಲು; ತಪ್ಪಿದ ಭಾರೀ ದುರಂತ

By ETV Bharat Karnataka Team

Published : Oct 24, 2023, 11:35 AM IST

ಚೆನ್ನೈ (ತಮಿಳುನಾಡು):ಇಂದು ಬೆಳಗ್ಗೆ ತಮಿಳುನಾಡು ರಾಜ್ಯದ ಚೆನ್ನೈನ ಅವಡಿ ರೈಲು ನಿಲ್ದಾಣದ ಬಳಿ ವಿದ್ಯುತ್ ಚಾಲಿತ ರೈಲು (electric train) ಹಳಿ ತಪ್ಪಿದೆ. ಅದೃಷ್ಟವಶಾತ್​ ಪ್ರಯಾಣಿಕರಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ರೈಲ್ವೆ ಹಳಿ ಬಿರುಕು ಬಿಟ್ಟಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

ತಿರುವಳ್ಳೂರಿನಿಂದ ಪುರಟ್ಚಿ ತಲೈವರ್​ ಡಾ. ಎಂಜಿಆರ್​ ಸೆಂಟ್ರಲ್​ ರೈಲು ನಿಲ್ದಾಣದವರೆಗೆ ರೈಲ್ವೆ ಹಳಿಯ (ಟ್ರ್ಯಾಕ್​) ನಿರ್ವಹಣಾ ಕಾರ್ಯ ನಡೆಯುತ್ತಿದೆ. ಈ ವೇಳೆ, ಇಂದು (ಅ.24) ಬೆಳಗ್ಗೆ ತಿರುವಳ್ಳೂರಿನಿಂದ ತಿರುಟ್ಟಣಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್​ ರೈಲು ಅಣ್ಣನೂರಿನಿಂದ ಅವಡಿ ತಲುಪಿದ ಬಳಿಕ ಅವಘಡ ಸಂಭವಿಸಿದೆ. ಈ ರೈಲಿನಲ್ಲಿ 4 ಬೋಗಿಗಳು ಹಳಿ ತಪ್ಪಿವೆ.

ಇಂದು ರಜಾದಿನವಾದ ಕಾರಣ ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಿತ್ತು. ಅದೃಷ್ಟವಶಾತ್​ ರೈಲಿನಲ್ಲಿ ಪ್ರಯಾಣಿಕರಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಅವಘಡದಿಂದಾಗಿ ಅವಡಿ -ಚೆನ್ನೈ ಮಾರ್ಗವಾಗಿ ತೆರಳುವ ರೈಲುಗಳು, ವಂದೇ ಭಾರತ್​ ಸೇರಿದಂತೆ ಇತರ ಎಲೆಕ್ಟ್ರಿಕ್​ ರೈಲುಗಳು, ಒಟ್ಟಾರೆಯಾಗಿ ರೈಲು ಸೇವೆಗಳ ಸಂಚಾರಕ್ಕೆ ತೊಂದರೆಯಾಗಿದೆ.

ಸದ್ಯ ರೈಲು ಭೋಗಿಗಳ ತೆರವು ಕಾರ್ಯಾಚರಣೆಯನ್ನು ರೈಲ್ವೆ ಇಲಾಖೆ ಕೈಗೊಂಡಿದೆ. ಈ ಅವಘಡಕ್ಕೆ ಚಾಲಕನ ಅಜಾಗರೂಕತೆ ಅಥವಾ ಸಿಗ್ನಲ್​ ವೈಫಲ್ಯ ಕಾರಣವೇ? ಎಂದು ರೈಲ್ವೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು

ಪ್ರತ್ಯೇಕ ಘಟನೆ - ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ್ದ ದುರಂತ:ಅಕ್ಟೋಬರ್​ 21ರಂದು ಬಿಹಾರದ ನಳಂದಾ ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ರೈಲು ಅಪಘಾತ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತ್ತು. ಮಗಧ ಎಕ್ಸ್​ಪ್ರೆಸ್​ ಮತ್ತು ಗೂಡ್ಸ್​ ರೈಲಿನ ಮಧ್ಯೆ ಇನ್ನೇನು ಡಿಕ್ಕಿಯಾಗಬೇಕು ಎನ್ನುವಷ್ಟರಲ್ಲಿ ಚಾಲಕ ಹಠಾತ್​ ಬ್ರೇಕ್​ ಹಾಕಿದ್ದ. ಇದರಿಂದ ನೂರಾರು ಜನರಿದ್ದ ರೈಲು ಸಂಭವನೀಯ ಅಪಘಾತದಿಂದ ಪಾರಾಗಿತ್ತು.

ಈಚೆಗೆ ಕೆಲವು ದುಷ್ಕರ್ಮಿಗಳು ಹಳಿಯ ಮೇಲೆ ಕಲ್ಲುಗಳು ಮತ್ತು ಕಬ್ಬಿಣದ ರಾಡ್​ಗಳನ್ನಿರಿಸಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿಸಲು ಯತ್ನಿಸಿದ್ದು, ತಕ್ಷಣ ಎಚ್ಚೆತ್ತ ಅಧಿಕಾರಿ ಮತ್ತು ಸಿಬ್ಬಂದಿ ರೈಲು ತುರ್ತಾಗಿ ನಿಲ್ಲಿಸಿ ಭಾರಿ ಅನಾಹುತ ತಪ್ಪಿಸಿದ್ದರು. ರಾಜಸ್ಥಾನದ ಚಿತ್ತೋರ್​ಗಢ ಜಿಲ್ಲೆಯಲ್ಲಿ ರೈಲ್ವೆ ಅಧಿಕಾರಿಗಳು ಹಳಿಯ ಮೇಲೆ ಕಲ್ಲು, ಬಂಡೆ ಮತ್ತು ರಾಡ್​ಗಳನ್ನು ಪತ್ತೆ ಹಚ್ಚಿ ಉದಯಪುರದಿಂದ ಜೈಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು ಸಂಚಾರ ತಡೆದಿದ್ದರು. ಇದರಿಂದ ಸಂಭವಿಸಲಿದ್ದ ಭಾರಿ ಅನಾಹುತ ತಪ್ಪಿತ್ತು.

ಇದನ್ನೂ ಓದಿ:ಮುಲ್ಲಾಪುರ ಬಳಿ ಹಳಿ ತಪ್ಪಿದ ಗೂಡ್ಸ್​ ರೈಲು: ತಪ್ಪಿದ ಭಾರಿ ಅನಾಹುತ

ABOUT THE AUTHOR

...view details