ಕರ್ನಾಟಕ

karnataka

ETV Bharat / bharat

ನಾಳೆ ಮುಂಬೈನಲ್ಲಿ I.N.D.I.A ಮೈತ್ರಿಕೂಟದ 3ನೇ ಸಭೆ: ಲೋಗೊ ಬಿಡುಗಡೆ ನಿರೀಕ್ಷೆ - ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ

ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ ನಾಳೆ ಮತ್ತು ನಾಡಿದ್ದು ಮುಂಬೈನಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

INDIA Alliance meeting in Mumbai
INDIA Alliance meeting in Mumbai

By ETV Bharat Karnataka Team

Published : Aug 30, 2023, 1:41 PM IST

ಮುಂಬೈ: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾದ (I.N.D.I.A) ದ ಮೂರನೇ ಸಭೆ ನಾಳೆ ಮುಂಬೈನಲ್ಲಿ ನಡೆಯಲಿದೆ. ಸಭೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇಂಡಿಯಾ ಮೈತ್ರಿಕೂಟದ ಮುಂಬೈ ಸಭೆಯಲ್ಲಿ ಲಾಂಛನ (ಲೋಗೊ) ಬಿಡುಗಡೆ ಮಾಡಿದ ನಂತರ ಕೂಟದ ಸಂಯೋಜಕ ಹುದ್ದೆಯ ಹೆಸರನ್ನು ಕೂಡ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಸಭೆಯಲ್ಲಿ ಭಾಗವಹಿಸಲು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಈಗಾಗಲೇ ಮುಂಬೈಗೆ ಆಗಮಿಸಿದ್ದಾರೆ. ಸಭೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಚುನಾವಣೆಗಳು ಹತ್ತಿರದಲ್ಲಿರುವುದರಿಂದ ಈ ಎಲ್ಲ ಸಭೆಗಳು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾವು ಈಗ ಅಂತಿಮ ಮಾರ್ಗಸೂಚಿಯನ್ನು ರಚಿಸಬೇಕಾಗಿದೆ. ಆದರೆ, ಸೀಟುಗಳ ಹಂಚಿಕೆಯ ಬಗ್ಗೆ ಈಗಲೇ ಯಾವುದೇ ಅವಸರ ಮಾಡಕೂಡದು." ಎಂದರು.

ಏತನ್ಮಧ್ಯೆ ಇಂಡಿಯಾ ಮೈತ್ರಿಕೂಟಕ್ಕೆ ತಾವು ಸೇರುವುದಿಲ್ಲ ಎಂದು ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಪುನರುಚ್ಚರಿಸಿದ್ದಾರೆ. ಎನ್​ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಬಹುತೇಕ ಪಕ್ಷಗಳು ಬಡವರ ವಿರೋಧಿ, ಕೋಮುವಾದಿಯಾಗಿದ್ದು, ಬಂಡವಾಳಶಾಹಿ ನೀತಿಗಳನ್ನು ಹೊಂದಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಿಎಸ್​ಪಿ ಆ ಎಲ್ಲ ಪಕ್ಷಗಳ ನೀತಿಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಿದೆ. ಹೀಗಾಗಿ ಅವರೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಯ ಬಗ್ಗೆ ಮಾಹಿತಿ ನೀಡಲು ಇಂದು ಜಂಟಿ ಪತ್ರಿಕಾಗೋಷ್ಠಿ ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ಮುಂಬೈನ ವಕೋಲಾದ ಗ್ರ್ಯಾಂಡ್ ಹಯಾತ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್, ಶಿವಸೇನೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕಾಂಗ್ರೆಸ್ ರಾಜ್ಯ ಅಧ್ಯಕ್ಷ ನಾನಾ ಪಟೋಲೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಲಾಸಾಹೇಬ್ ಥೋರಟ್​, ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ್ ಚೌಹಾಣ್​ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಸಭೆಗೆ ಕಳೆದ 15 ದಿನಗಳಿಂದ ಸಿದ್ಧತೆ ನಡೆಸಲಾಗುತ್ತಿದೆ. ಸಭೆಯು ಇದೇ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನ ಪಂಚತಾರಾ ಹೋಟೆಲ್ ಗ್ರ್ಯಾಂಡ್ ಹಯಾತ್ ನಲ್ಲಿ ನಡೆಯಲಿದೆ. ಸಭೆಯಲ್ಲಿ ಬಿಜೆಪಿಯನ್ನು ವಿರೋಧಿಸುವ 26 ಪಕ್ಷಗಳು ಭಾಗವಹಿಸಲಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟದ ಸಂಚಾಲಕರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಇಂದಿನ ಸಭೆಯಲ್ಲಿ ಘೋಷಿಸಬಹುದು ಎಂದು ಮೂಲಗಳು ತಿಳಿಸಿವೆ. ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರೊಂದಿಗೆ ಖರ್ಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರನ್ನೇ ಹೆಸರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಸಭೆಗಾಗಿ ಗ್ರ್ಯಾಂಡ್ ಹಯಾತ್ ಹೋಟೆಲ್​ನ 200 ಕ್ಕೂ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಸೀಟು ಹಂಚಿಕೆ ಸೂತ್ರದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಉಕ್ರೇನ್​ಗೆ ಮತ್ತೆ 250 ಮಿಲಿಯನ್ ಡಾಲರ್​ ಮೌಲ್ಯದ ಮಿಲಿಟರಿ ನೆರವು ನೀಡಿದ ಅಮೆರಿಕ

ABOUT THE AUTHOR

...view details