ನವದೆಹಲಿ:ನಾಳೆಯಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಕ್ಕೂ ಮೊದಲು ಇಂದು ಅವರು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಇದರಲ್ಲಿ ಸುಗಮ ಕಲಾಪಕ್ಕೆ ಸರ್ಕಾರ ವಿಪಕ್ಷಗಳ ಸಹಕಾರವನ್ನು ಕೋರಲಿದೆ. 27 ಪಕ್ಷಗಳ 37 ನಾಯಕರು ಭಾಗಿಯಾಗಲಿದ್ದಾರೆ.
ಜನವರಿ 31 ರಿಂದ ಬಜೆಟ್ ಅಧಿವೇಶನಕ್ಕೆ ಚಾಲನೆ ಸಿಗಲಿದೆ. ಹೀಗಾಗಿ ಇಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿರುವ ವಿಷಯಗಳನ್ನೂ ಪ್ರಸ್ತಾಪಿಸಲಿದೆ ಎಂದು ತಿಳಿದುಬಂದಿದೆ. ಅಧಿವೇಶನದ ಭಾಗವಾಗಿ ಸಹಕಾರದ ಕಾರ್ಯತಂತ್ರ ರೂಪಿಸಲು ಎನ್‌ಡಿಎ ನಾಯಕರ ಸಭೆಯೂ ಇಂದೇ ನಡೆಯಲಿದೆ. ಬಜೆಟ್ ಮತ್ತು ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಗಳ ಬಗ್ಗೆ ಚರ್ಚೆಗಾಗಿ ಈ ಸಭೆ ಆಯೋಜಿಸಲಾಗಿದೆ.
ರಾಷ್ಟ್ರಪತಿ ಮುರ್ಮು ಭಾಷಣ:ಅಧಿವೇಶನದ ಮೊದಲ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮೂಲಕ ಸಂಸತ್ ಕಲಾಪ ಅಧಿಕೃತ ಚಾಲನೆ ಪಡೆಯಲಿದೆ. ಇದರ ನಂತರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಓದಲಿದ್ದಾರೆ. ಕೇಂದ್ರ ಬಜೆಟ್ 2024 ರ ಲೋಕಸಭೆ ಚುನಾವಣೆಯ ಕೊನೆಯ ಪೂರ್ಣ ಬಜೆಟ್ ಇದಾಗಿರಲಿದೆ.
ಅಧಿವೇಶನದ ಮೊದಲ ಭಾಗ ಜನವರಿ 31 ರಿಂದ ಆರಂಭವಾಗಿ ಫೆಬ್ರವರಿ 13 ರವರೆಗೆ ನಡೆಯಲಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಉತ್ತರದೊಂದಿಗೆ ಮುಕ್ತಾಯಗೊಳ್ಳಲಿದೆ. ಅಲ್ಲದೇ, ಇದೇ ವೇಳೆ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಪಡೆಯಲಾಗುವುದು. ಉಭಯ ಸದನಗಳಲ್ಲಿ ಗಂಭೀರ ಚರ್ಚೆಗಳು ನಡೆಯಲಿವೆ. ವಿವಿಧ ಸಚಿವಾಲಯಗಳ ಅನುದಾನದ ಬೇಡಿಕೆಯನ್ನು ಚರ್ಚಿಸಲು ಸಂಸದೀಯ ಸಮಿತಿಗಳು ಸಣ್ಣ ವಿರಾಮ ಪಡೆದ ಬಳಿಕ ನಡೆಯಲಿರುವ ಅಧಿವೇಶನವಾಗಲಿದೆ.