ಮುಂಬೈ: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ನಾಲ್ಕು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಬಾರ್ಜ್ ಮುಳುಗಿತ್ತು. 250ಕ್ಕೂ ಹೆಚ್ಚು ಮಂದಿಯಿದ್ದ ಈ ಬಾರ್ಜ್‌ನಲ್ಲಿ ಈಗಾಗಲೇ 186 ಮಂದಿಯನ್ನು ರಕ್ಷಿಸಲಾಗಿದೆ. 37 ಶವಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದೆ. ಇನ್ನೂ 38 ಮಂದಿಯ ಪತ್ತೆಗಾಗಿ ನೌಕಾಪಡೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕಳೆದ ರಾತ್ರಿಯಿಡೀ ನೌಕಾ ಪಡೆ ಕಡಲಿನಲ್ಲಿ ಇನ್ನುಳಿದವರಿಗಾಗಿ ಹುಡುಕಾಟ ನಡೆಸಿತ್ತು.
ಇಂದು ಬೆಳಗ್ಗೆ ನೌಕಾಪಡೆ ಮತ್ತೆ ವೈಮಾನಿಕ ಹುಡುಕಾಟ ಮತ್ತು ಯುದ್ಧ ನೌಕೆಗಳ ಮೂಲಕ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ಮುಂಬೈ ಕಡಲ ತೀರದಿಂದ ಹೆಲಿಕಾಪ್ಟರ್ಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಿ ಬಾರ್ಜ್ ಪಿ 305 ಬೋಟ್ ಮುಳುಗಡೆಯಾದ ಸ್ಥಳದಲ್ಲಿ ಹುಡುಕಾಟ ನಡೆಸುತ್ತಿವೆ.
ಇಲ್ಲಿಯವರೆಗೆ 186 ಮಂದಿಯ ರಕ್ಷಣೆ:
ಹವಾಮಾನ ವೈಪರೀತ್ಯದ ನಡುವೆಯೂ ರಕ್ಷಣಾ ಸಿಬ್ಬಂದಿ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಳುಗಡೆಯಾದ ಬಾರ್ಜ್ ಪಿ 305 ನಲ್ಲಿದ್ದ 261 ಮಂದಿಯ ಪೈಕಿ 37 ಜನರು ಈಗಾಗಲೇ ಮೃತಪಟ್ಟಿದ್ದಾರೆ. 38 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಉಳಿದಂತೆ 186 ಮಂದಿಯನ್ನು ರಕ್ಷಿಸಲಾಗಿದೆ. ಇದರೊಂದಿಗೆ ಇನ್ನೊಂದು ಟಗ್ ಬೋಟ್ ವರಪ್ರದಾದಲ್ಲಿದ್ದ ಇಬ್ಬರನ್ನೂ ರಕ್ಷಿಸಲಾಗಿದೆ. ಕೆಲ ಮೃತದೇಹಗಳ ಕಾನೂನು ಕಾರ್ಯಗಳನ್ನು ಮುಗಿಸಿರುವ ಯೆಲ್ಲೋ ಗೇಟ್ ಠಾಣೆ ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.