ನವದೆಹಲಿ: ಯುದ್ಧ ಪೀಡಿತ ಸುಡಾನ್‌ನಿಂದ ಭಾರತೀಯರ ಸ್ಥಳಾಂತರ ಕಾರ್ಯ ಆರಂಭಗೊಳಿಸಲಾಗಿದ್ದು, ಈ ವರೆಗೂ ಒಟ್ಟು 534 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಮೊದಲು ಭಾರತೀಯ ನೌಕಾಪಡೆಯ ಹಡಗು ಸುಡಾನ್ ನಿಂದ 278 ನಾಗರಿಕರನ್ನು ರಕ್ಷಿಸಿದ ಒಂದು ದಿನದ ಅಂತರದಲ್ಲೇ, ಭಾರತೀಯ ವಾಯುಪಡೆಯ ಎರಡು C-130J ಮಿಲಿಟರಿ ಸಾರಿಗೆ ವಿಮಾನಗಳು ಬುಧವಾರ ಪೋರ್ಟ್ ಸುಡಾನ್‌ನಿಂದ 256 ಭಾರತೀಯರನ್ನು ಜೆಡ್ಡಾಕ್ಕೆ ಕರೆತಂದಿವೆ. ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಸುಡಾನ್‌ನಿಂದ ಇಲ್ಲಿಯವರೆಗೆ ಸ್ಥಳಾಂತರಿಸಲಾದ ಒಟ್ಟು ಭಾರತೀಯರ ಸಂಖ್ಯೆ 534 ಆಗಿದೆ.
'ಆಪರೇಷನ್ ಕಾವೇರಿ' ಅಡಿಯಲ್ಲಿ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ಸೌದಿ ಅರೇಬಿಯಾದ ಜೆಡ್ಡಾ ನಗರಕ್ಕೆ ಕರೆದೊಯ್ಯುಲಾಗುತ್ತಿದೆ. ಅಲ್ಲಿಂದ ಅವರನ್ನು ತಮ್ಮ ತಮ್ಮ ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಸುಡಾನ್ ನಿಂದ ಭಾರತೀಯ ಪ್ರಜೆಗಳನ್ನು ಕರೆತರುವ ಹಿನ್ನೆಲೆ ಭಾರತವು ಜೆಡ್ಡಾದಲ್ಲಿ ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದ್ದು, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಭಾರತೀಯರ ಸ್ಥಳಾಂತರಿಸುವ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ರನಲ್ಲಿ ಈ ಕುರಿತು ಹಂಚಿಕೊಂಡಿದ್ದು, ಮಂಗಳವಾರ ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮೇಧಾ ಹಡಗು ಮೂಲಕ 278 ಭಾರತೀಯರ ಮೊದಲ ಬ್ಯಾಚ್ ಅನ್ನು ಪೋರ್ಟ್ ಸುಡಾನ್‌ನಿಂದ ಸ್ಥಳಾಂತರಿಸಲಾಗಿತ್ತು. ಹಾಗೆಯೇ ಮೊದಲ C-130J ವಿಮಾನದ ಮೂಲಕ 121 ಪ್ರಯಾಣಿಕರನ್ನು ಜೆಡ್ಡಾಕ್ಕೆ ಕರೆತರಲಾಗಿತ್ತು. ಎರಡನೇಯ ವಿಮಾನದಲ್ಲಿ ಸುಡಾನ್‌ನಿಂದ 135 ಪ್ರಯಾಣಿಕರನ್ನು ಜೆಡ್ಡಾಕ್ಕೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಆಪರೇಷನ್ ಕಾವೇರಿ ಕಾರ್ಯಚರಣೆ ಸಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.