ನವದೆಹಲಿ: ಭಾರತದಲ್ಲಿ ಇಲ್ಲಿಯವರೆಗೆ 358 ಜನರಲ್ಲಿ ಹೊಸ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿದ್ದು, ಈ ಪೈಕಿ 114 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ ಇದೀಗ 244 ಸೋಂಕಿತ ಪ್ರಕರಣಗಳಿವೆ ಎಂದು ತಿಳಿಸಿದರು.
ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 31 ಒಮಿಕ್ರಾನ್ ಪ್ರಕರಣಗಳಿದ್ದು, ಮಹಾರಾಷ್ಟ್ರದಲ್ಲಿ 88, ದೆಹಲಿ 67, ತೆಲಂಗಾಣ 38, ತಮಿಳುನಾಡು 34, ಗುಜರಾತ್ 30, ಕೇರಳ 27 ಹಾಗೂ ರಾಜಸ್ಥಾನದಲ್ಲಿ 22 ಪ್ರಕರಣಗಳು ದಾಖಲಾಗಿವೆ.
ಉಳಿದಂತೆ ಹರಿಯಾಣ, ಒಡಿಶಾ, ಜಮ್ಮು - ಕಾಶ್ಮೀರ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡನಲ್ಲೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದರು. ಕಳೆದ 24 ಗಂಟೆಯಲ್ಲಿ ದಾಖಲೆಯ 122 ಹೊಸ ಪ್ರಕರಣಗಳು ದಾಖಲಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಪ್ರಕರಣ ದಾಖಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.