ಕರ್ನಾಟಕ

karnataka

ಅಕ್ರಮ ಪ್ರವೇಶ: 32 ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ ಭದ್ರತಾ ಪಡೆ

By ETV Bharat Karnataka Team

Published : Nov 2, 2023, 10:27 PM IST

ಈಶಾನ್ಯ ರಾಜ್ಯವನ್ನು ಅಕ್ರಮವಾಗಿ ಪ್ರವೇಶಿಸಿದ 32 ಮ್ಯಾನ್ಮಾರ್‌ ಪ್ರಜೆಗಳನ್ನು ಭದ್ರತಾ ಪಡೆ ಬಂಧಿಸಿದೆ.

32 ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ ಭದ್ರತಾ ಪಡೆ
32 ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ ಭದ್ರತಾ ಪಡೆ

ಇಂಫಾಲ :ಮಣಿಪುರದ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಮಂಗಳವಾರ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ, ಮುಂದಿನ ಶೋಧ ಕಾರ್ಯಾಚರಣೆಯಲ್ಲಿ ಜಂಟಿ ಭದ್ರತಾ ತಂಡವು ಬುಧವಾರ ಈಶಾನ್ಯ ರಾಜ್ಯವನ್ನು ಅಕ್ರಮವಾಗಿ ಪ್ರವೇಶಿಸಿದ 32 ಮ್ಯಾನ್ಮಾರ್‌ ಪ್ರಜೆಗಳನ್ನು ಬಂಧಿಸಿದೆ.

32 ಮಂದಿಯಲ್ಲಿ 10 ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ಹೆಲಿಕಾಪ್ಟರ್ ಮೂಲಕ ಇಂಫಾಲ್‌ಗೆ ಕರೆದೊಯ್ಯಲಾಗಿದೆ. ಉಳಿದ 22 ಮಂದಿಯನ್ನು ಮೊರೆಹ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಪವಿಭಾಗೀಯ ಪೊಲೀಸ್ ಅಧಿಕಾರಿ (ಮೊರೆಹ್) ಚಿಂಗ್ತಮ್ ಆನಂದ್ ಕುಮಾರ್ ಅವರು ಇಂಫಾಲ್‌ನಿಂದ 110 ಕಿ ಮೀ ದೂರದಲ್ಲಿರುವ ದಕ್ಷಿಣದ ಗಡಿ ಪಟ್ಟಣದಲ್ಲಿ ಹೆಲಿಪ್ಯಾಡ್‌ನ ಉದ್ದೇಶಿತ ಸ್ಥಳವನ್ನು ಸ್ವಚ್ಛಗೊಳಿಸುವ ಮೇಲ್ವಿಚಾರಣೆ ನಡೆಸುತ್ತಿದ್ದಾಗ, ಶಂಕಿತ ಉಗ್ರಗಾಮಿಗಳು ಮಂಗಳವಾರ ಅವರನ್ನು ಗುಂಡಿಕ್ಕಿ ಕೊಂದರು.

ವಿಶೇಷ ಪೊಲೀಸ್ ಕಮಾಂಡೋಗಳು, ಇಂಡಿಯಾ ರಿಸರ್ವ್ ಬೆಟಾಲಿಯನ್ ಮತ್ತು ಅಸ್ಸೋಂ ರೈಫಲ್ಸ್ ಸೇರಿದಂತೆ ಜಂಟಿ ಭದ್ರತಾ ತಂಡವು ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು 44 ಜನರನ್ನು ಸುತ್ತುವರೆದಿದೆ. ಭದ್ರತಾ ತಂಡವು ಪರಿಶೀಲನೆಯ ಸಮಯದಲ್ಲಿ ಯಾವುದೇ ಮಾನ್ಯ ದಾಖಲೆಗಳಿಲ್ಲದೇ ಮೋರೆಗೆ ಪ್ರವೇಶಿಸಿದ 32 ಮ್ಯಾನ್ಮಾರ್ ಪ್ರಜೆಗಳನ್ನು ಪತ್ತೆ ಮಾಡಿದೆ ಎಂದು ಅಧಿಕಾರಿ ಹೇಳಿದರು. ಅವರಲ್ಲಿ 10 ಮಂದಿಯನ್ನು ಮತ್ತಷ್ಟು ಪರಿಶೀಲಿಸಬೇಕಾಗಿರುವುದರಿಂದ, ಅವರನ್ನು ಇಂಫಾಲ್‌ಗೆ ಕರೆದೊಯ್ಯಲಾಯಿತು ಮತ್ತು ಪ್ರಸ್ತುತ ಇಂಫಾಲ್ ಪೂರ್ವ ಜಿಲ್ಲೆಯ ವಿದೇಶಿಯರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಇಲ್ಲಿನ 1ನೇ ಬೆಟಾಲಿಯನ್ ಮಣಿಪುರ ರೈಫಲ್ಸ್ ಕಾಂಪ್ಲೆಕ್ಸ್‌ನಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಅಧಿಕಾರಿಯ ಅಂತ್ಯಕ್ರಿಯೆ ನಂತರ ಅವರ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.

"ಕರ್ತವ್ಯದ ವೇಳೆಯಲ್ಲಿ ಹುತಾತ್ಮರಾದ ಶ್ರೀ ಚಿಂಗ್ತಮ್ ಆನಂದ್ ಕುಮಾರ್, ಎಂಪಿಎಸ್, ಎಸ್‌ಡಿಪಿಒ, ಮೋರೆ ಅವರಿಗೆ ನಮ್ರ ಶ್ರದ್ಧಾಂಜಲಿ ಮತ್ತು ಆಳವಾದ ಗೌರವಗಳನ್ನು ಸಲ್ಲಿಸಿದ್ದೇವೆ'' ಎಂದು ಫೇಸ್​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. ಮಣಿಪುರ ಇಂದು ನಿಜವಾದ ಮಣ್ಣಿನ ಮಗನನ್ನು ಕಳೆದುಕೊಂಡಿದೆ. ಆದರೆ ದೇಶಕ್ಕಾಗಿ ನಿಮ್ಮ ತ್ಯಾಗಗಳು ವ್ಯರ್ಥವಾಗುವುದಿಲ್ಲ. ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ. ರಾಜ್ಯಪಾಲ ಅನುಸೂಯಾ ಉಯ್ಕೆ ಕೂಡಾ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ:ಮಣಿಪುರ: ಮೋರೆಹ ಗಡಿ ಪಟ್ಟಣದಲ್ಲಿ ಉಗ್ರರ ಗುಂಡಿಗೆ ಎಸ್‌ಡಿಪಿಒ ಬಲಿ

ABOUT THE AUTHOR

...view details