ನವದೆಹಲಿ:ಭಾರತದಲ್ಲಿ ನವೆಂಬರ್ 4 ಮತ್ತು ಡಿಸೆಂಬರ್ 14ರ ನಡುವೆ ಸುಮಾರು 32 ಲಕ್ಷ ವಿವಾಹಗಳು ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ. ಇದು ದೇಶದ ವರ್ತಕ ಸಮುದಾಯಕ್ಕೆ 3.75 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ಉತ್ಪಾದಿಸುತ್ತದೆ ಎಂದು ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ತನ್ನ ಸಂಶೋಧನಾ ವಿಭಾಗವು ನಡೆಸಿದ ಸಮೀಕ್ಷೆಯ ಮೇಲೆ ತನ್ನ ಮೌಲ್ಯಮಾಪನವನ್ನು ಆಧರಿಸಿದೆ. 4,302 ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ 35 ನಗರಗಳಲ್ಲಿ ಸಮೀಕ್ಷೆ ನಡೆಸಲಾಯಿತು.
ಈ ಋತುವಿನಲ್ಲಿ ದೆಹಲಿಯೊಂದರಲ್ಲೇ 3.5 ಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆಯುವ ನಿರೀಕ್ಷೆಯಿದ್ದು, ದೆಹಲಿಯಲ್ಲಿಯೇ ಸುಮಾರು 75,000 ಕೋಟಿ ರೂಪಾಯಿ ವ್ಯವಹಾರ ನಡೆಯುವ ನಿರೀಕ್ಷೆ ಇದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 25 ಲಕ್ಷ ವಿವಾಹಗಳು ನಡೆದಿದ್ದು, ವೆಚ್ಚ 3 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಒಟ್ಟಾರೆ ಈ ಮದುವೆ ಸೀಸನ್‌ನಲ್ಲಿ ಸುಮಾರು 3.75 ಲಕ್ಷ ಕೋಟಿ ರೂಪಾಯಿ ಮದುವೆ ಖರೀದಿ ಮೂಲಕ ಮಾರುಕಟ್ಟೆಗೆ ಬರಲಿದೆ. ಮದುವೆಯ ಮುಂದಿನ ಹಂತವು ಜನವರಿ 14 ರಿಂದ ಪ್ರಾರಂಭವಾಗಲಿದ್ದು, ಜುಲೈವರೆಗೆ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ:'ಅದ್ಧೂರಿ ಮದುವೆಯಾಗಿ ಹಣ ವ್ಯರ್ಥ ಮಾಡಬೇಡಿ..': ನವಜೋಡಿಗಳಿಗೆ ಪ್ರಧಾನಿ ಮೋದಿ ಕಿವಿಮಾತು