ಶ್ರೀನಗರ( ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಸಕ್ರಿಯವಾಗಿರುವ ಭಯೋತ್ಪಾದಕರ ಸಂಖ್ಯೆ 300ಕ್ಕಿಂತ ಹೆಚ್ಚಿದ್ದು, ಇದರಲ್ಲಿ 82 ವಿದೇಶಿ ಉಗ್ರರು, 53 ಸ್ಥಳೀಯರು ಎಂದು ಗುರುತಿಸಲಾಗಿದೆ. ಉಳಿದ 170 ಮಂದಿಯನ್ನು ಗುರುತು ಸಿಗದವರೆಂದು ಪಟ್ಟಿಮಾಡಲಾಗಿದೆ ಎಂದು ಉತ್ತರ ಸೇನಾ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದ್ದಾರೆ.
ಮಂಗಳವಾರದಂದು ನಡೆದ ಪೂಂಚ್ ಲಿಂಕ್ - ಅಪ್ ದಿನದ ಸಂದರ್ಭದಲ್ಲಿ ಪೂಂಚ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜನರಲ್ ಆಫೀಸರ್ ಕಮಾಂಡಿಂಗ್ - ಇನ್-ಚೀಫ್ ನಾರ್ದರ್ನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಸೇನೆಯಲ್ಲಿ ಲಭ್ಯವಿರುವ ಅಂಕಿ - ಅಂಶಗಳ ಪ್ರಕಾರ ರಜೌರಿ - ಪೂಂಚ್ ಪ್ರದೇಶ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 305 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ.
ಇದರಲ್ಲಿ ಆತಂಕಕಾರಿ ಸಂಗತಿಯೆಂದರೆ, ಸಕ್ರಿಯರಾಗಿರುವ ಭಯೋತ್ಪಾದಕರಲ್ಲಿ 170 ಅಪರಿಚಿತ ಭಯೋತ್ಪಾದಕರು ಅಪರಾಧ ಚಟುವಟಿಕೆಗಳನ್ನು ನಡೆಸಲು ನಿಯೋಜಿಸಲ್ಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಹೇಳಿದರು.