ಚಂಡೀಗಢ(ಪಂಜಾಬ್) :ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಜನರಿಗೆ ನೀಡಿರುವ ಪ್ರಮುಖ ಭರವಸೆ ಈಡೇರಿಸುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ. ಮುಂದಿನ ತಿಂಗಳು ಜುಲೈ 1ರಿಂದ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.
ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಒಂದು ತಿಂಗಳು ಅಧಿಕಾರ ಪೂರೈಕೆ ಮಾಡಿದೆ. ಇದರ ಬೆನ್ನಲ್ಲೇ ಈ ಮಹತ್ವದ ಘೋಷಣೆ ಹೊರ ಹಾಕಿದೆ. ಈ ಮೂಲಕ ಅಲ್ಲಿನ ಜನರ ಮೆಚ್ಚುಗೆ ಗಳಿಸುವಲ್ಲಿ ಭಗವಂತ್ ಮಾನ್ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಪಂಜಾಬ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಪಂಜಾಬ್ ಸಿಎಂ ಭಗವಂತ್ ಮಾನ್ ಒಂದಿಲ್ಲೊಂದು ರೀತಿಯ ವಿಭಿನ್ನ ವಿಷಯಗಳಿಂದ ಹೆಚ್ಚು ಮೆಚ್ಚುಗೆ ಗಳಿಸುತ್ತಿದ್ದು, ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ 25,000 ಉದ್ಯೋಗಿಗಳ ನೇಮಕಾತಿಗೆ ಆದೇಶ ಹೊರಡಿಸಿದ್ದರು.