ಮನಾಲಿ: ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ಸಿಲುಕಿರುವ 300 ಜನ ಪ್ರವಾಸಿಗರನ್ನು ರಕ್ಷಿಸಲು ಹಿಮ ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಸ್ಪಿತಿ ಕಣಿವೆಯ ಹಿಮಾಚ್ಛಾದಿತ ರಸ್ತೆಯಲ್ಲಿ 300 ಪ್ರವಾಸಿಗರು ಸಿಲುಕಿದ್ದು, ಇದರಲ್ಲಿ ಮೂವರು ವಿದೇಶಿಯರೂ ಇದ್ದಾರೆ. ಸಮುದ್ರ ಮಟ್ಟದಿಂದ ಸುಮಾರು 15,060 ಅಡಿ ಎತ್ತರದಲ್ಲಿರುವ ಸ್ಪಿತಿ ಕಣಿವೆಯ ರಸ್ತೆಯಲ್ಲಿನ ಹಿಮ ತೆರವುಗೊಳಿಸುವ ಕಾರ್ಯಾಚರಣೆ ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಅತಿ ಕಠಿಣ ರಕ್ಷಣಾ ಕಾರ್ಯಾಚರಣೆಗಳಲ್ಲೊಂದಾಗಿದೆ. ಹಿಮ ಯೋಧರು ಬುಧವಾರ ಬೆಳಗ್ಗೆ ಹಿಮ ತೆರವು ಕೆಲಸ ಆರಂಭಿಸಿದ್ದಾರೆ.
300 ಪ್ರವಾಸಿಗರ ಪೈಕಿ ಏಳು ಪ್ರವಾಸಿಗರು ಹೆಚ್ಚು ವಯಸ್ಸಾದವರು ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರನ್ನು ಮಂಗಳವಾರ ಹೆಲಿಕಾಪ್ಟರ್ ಮೂಲಕ ಚಂದರ್ತಾಲ್ ಸರೋವರದ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಪ್ರತಿಕೂಲ ಹವಾಮಾನ ಮತ್ತು ಕಳಪೆ ಗೋಚರತೆಯಿಂದಾಗಿ ಹೆಲಿಕಾಪ್ಟರ್ ಮೂಲಕ ಹೆಚ್ಚಿನ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ.
"ಕುಂಜುಮ್ ಪಾಸ್ ಬಳಿ ಹಿಮ ತೆರವು ಕಾರ್ಯಾಚರಣೆಯು ಮೂರನೇ ದಿನವಾದ ಇಂದು ಬುಧವಾರ ಮುಂಜಾನೆ ಪ್ರಾರಂಭವಾಯಿತು ಮತ್ತು 12-ಕಿಮೀ ವ್ಯಾಪ್ತಿಯವರೆಗೆ ವಾಹನಗಳು ಸಾಗುವಷ್ಟು ಹಿಮ ತೆರವುಗೊಳಿಸಲಾಗಿದೆ" ಎಂದು ಸ್ಪಿತಿಯ ಪ್ರಧಾನ ಕಚೇರಿ ಕಾಜಾದಲ್ಲಿ ನಿಯೋಜಿಸಲಾದ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ್ ಬನ್ಯಾಲ್ ದೂರವಾಣಿ ಮೂಲಕ ತಿಳಿಸಿದರು. ಈಗ ಚಂದರ್ತಾಲ್‌ನಲ್ಲಿರುವ ಟೆಂಟ್ ವಸತಿಗೆ ಪ್ರವಾಸಿಗರು ತಲುಪಲು ಒಟ್ಟು 25 ಕಿಮೀ ದೂರದಷ್ಟು ಹಿಮ ತೆರವುಗೊಳಿಸಬೇಕಿದೆ.
ಹಿಮ ತೆರವು ತಂಡಗಳ ಜೊತೆಯಲ್ಲಿರುವ ಬನ್ಯಾಲ್ ಪ್ರಕಾರ, ಮಂಗಳವಾರ ರಾತ್ರಿ ಚಳಿಯು ಶೂನ್ಯಕ್ಕಿಂತ ಕೆಳಗಿಳಿದ ಕಾರಣ ಹಿಮ ತೆರವು ಕಾರ್ಯವನ್ನು ನಿಲ್ಲಿಸಬೇಕಾಯಿತು. ಈ ಬಗ್ಗೆ ಮಾತನಾಡಿದ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಡೆಪ್ಯುಟಿ ಕಮಿಷನರ್ ರಾಹುಲ್ ಜೈನ್, ಈ ವಾರದ ಹಿಮಪಾತದ ನಂತರ ಚಂದರ್ತಾಲ್ ಪ್ರದೇಶದಲ್ಲಿ ನಾಲ್ಕು ಅಡಿಗಿಂತಲೂ ಹೆಚ್ಚು ಹಿಮ ಜಮೆಯಾಗಿದೆ ಎಂದು ಹೇಳಿದರು.
ಉಪಗ್ರಹ ಫೋನ್ ಜೊತೆಗೆ ಕೊಂಡೊಯ್ದ ಆರು ಜನರ ರಕ್ಷಣಾ ತಂಡವೊಂದು ಪ್ರವಾಸಿಗರು ಇರುವ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ತಲುಪಿದೆ. ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಅವರು ಅಲ್ಲಿಗೆ ತಲುಪಿದ್ದಾರೆ. ಆದರೆ ಹಿಮಾಚ್ಛಾದಿತ ಮಾರ್ಗಗಳಲ್ಲಿ ನಡೆಯುವುದು ಅಪಾಯಕಾರಿಯಾಗಿದ್ದು, ಎಲ್ಲ ಪ್ರವಾಸಿಗರಿಗೆ ಇದು ಸಾಧ್ಯವಾಗದ ಕಾರಣ ಅವರನ್ನು ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ರಸ್ತೆಯ ಮೂಲಕವೇ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕಾಜಾ-ಸಮುಡೊ ರಸ್ತೆಯನ್ನು ಈವರೆಗೂ ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಾಗಿಲ್ಲ ಎಂದು ರಾಹುಲ್ ಜೈನ್ ಫೋನ್ ಮೂಲಕ ತಿಳಿಸಿದರು.
ಮಾರ್ಗದಲ್ಲಿ ಯಾವುದೇ ತಂಗುದಾಣವಿಲ್ಲದ ಕಾರಣ ಮತ್ತು ಕ್ಯಾಂಪಿಂಗ್ ಕಾರ್ಯಸಾಧ್ಯವಾಗದ ಕಾರಣದಿಂದ ನಮ್ಮ ರಕ್ಷಣಾ ಪಡೆ ಕಾರ್ಯಕರ್ತರು ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ನಲ್ಲಿ ರಾತ್ರಿ ಕಳೆದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಹಿಮಬಿರುಗಾಳಿಗಳು ಮತ್ತು ಹಿಮಕುಸಿತಗಳ ಸಾಧ್ಯತೆಗಳಿರುವುದರಿಂದ ಸಿಬ್ಬಂದಿಯು ಆರ್ಕ್ಟಿಕ್ ತರಹದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಕುಂಝುಮ್ ಪಾಸ್ ಬಳಿ ಆಮ್ಲಜನಕದ ಮಟ್ಟ ಕಡಿಮೆಯಾಗಿದೆ ಮತ್ತು ಪ್ರತಿ ಮಧ್ಯಾಹ್ನ ಹೆಚ್ಚಿನ ವೇಗದ ಗಾಳಿ ಬೀಸುತ್ತಿದೆ. ದೊಡ್ಡ ಪ್ರಮಾಣದ ಹಿಮವನ್ನು ಬುಲ್ಡೋಜರ್ ತೆರವುಗೊಳಿಸಿದ ನಂತರ ಉಳಿದ ಸಣ್ಣ ಪ್ರಮಾಣದ ಹಿಮವನ್ನು ಕಾರ್ಮಿಕರು ತೆರವುಗೊಳಿಸುತ್ತಿದ್ದಾರೆ.
ಇದನ್ನೂ ಓದಿ : ಕಚ್ಚಾ ತೈಲ ಪೂರೈಕೆ: ಪಾಕಿಸ್ತಾನ - ರಷ್ಯಾ ಮಧ್ಯದ ಒಪ್ಪಂದಕ್ಕೆ ಆರಂಭದಲ್ಲೇ ವಿಘ್ನ