ಕಾನ್ಪುರ(ಉತ್ತರ ಪ್ರದೇಶ):ಜಿಲ್ಲೆಯಲ್ಲಿ ಮತ್ತೆ 30 ಝಿಕಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, ಒಟ್ಟಾರೆ 66 ಪ್ರಕರಣಗಳು ದಾಖಲಾಗಿವೆ. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿವಿಯ ವೈರಾಲಜಿ ಲ್ಯಾಬ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಕೆಜಿಎಂಯು) ಯಲ್ಲಿ ನಡೆಸಿದ ಪರೀಕ್ಷೆಯಲ್ಲಿ 30 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲೆಯಲ್ಲಿ ಅ.23 ರಂದು ಮೊದಲ ಬಾರಿಗೆ ಝಿಕಾ ವೈರಸ್ ಪ್ರಕರಣ ದಾಖಲಾದ ಬಳಿಕ ಒಂದೇ ದಿನದಲ್ಲಿ ಕಂಡುಬಂದ ಅತಿಹೆಚ್ಚು ಸಂಖ್ಯೆಯ ಪ್ರಕರಣಗಳಾಗಿವೆ. ಸೋಂಕಿತರಾದ 30 ಜನರಲ್ಲಿ ಮೂವರು ಮಹಿಳೆಯರು, 27 ಜನ ಪುರುಷರಾಗಿದ್ದಾರೆ. ಗುರುವಾರದವರೆಗೆ ದಾಖಲಾದ ಪ್ರಕರಣಗಳಲ್ಲಿ 45 ಪುರುಷರು ಮತ್ತು 21 ಮಹಿಳೆಯರಿದ್ದಾರೆ. ಮೂರು ದಿನಗಳ ಹಿಂದೆ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. 30 ಜನರಲ್ಲೂ ಝಿಕಾ ದೃಢಪಟ್ಟಿದೆ ಎಂದು ಕಾನ್ಪುರ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ನೇಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.