ಅಲಿಗಢ (ಉತ್ತರಪ್ರದೇಶ):ವಿದ್ಯಾ ಕೇಂದ್ರವಾದ ಉತ್ತರಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಎಎಂಯುನ ವಿದ್ಯಾರ್ಥಿಗಳಾದ ಸಾದಿಕ್, ಫಿರೋಜ್ ಆಲಂ ಮತ್ತು ಅಬ್ದುಲ್ಲಾ ಗಾಯಾಳುಗಳೆಂದು ಗುರುತಿಸಲಾಗಿದೆ. ಇವರನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬ್ಯಾಚುರಲ್ ಆಫ್ ಯುನಾನಿ ಮೆಡಿಸಿನ್ ಸೈನ್ಸ್ನ (ಬಿಯುಎಂಎಸ್) ಹಳೆಯ ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳ ಮಧ್ಯೆ ಯಾವುದೋ ಕಾರಣಕ್ಕಾಗಿ ಗಲಾಟೆ ನಡೆದಿದೆ. ಇದರಲ್ಲಿ 11 ಜನ ಹೊರಗಿನಿಂದ ಬಂದ ಅಪರಿಚಿತ ವ್ಯಕ್ತಿಗಳು ಕೂಡ ಇದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
ವಿಶ್ವವಿದ್ಯಾನಿಲಯದ ಪ್ರಭಾರಿ ಪ್ರೊ.ಅಸಿಮ್ ಸಿದ್ದಿಕಿ ಅವರ ಪ್ರಕಾರ, ವಿಎಂ ಹಾಲ್‌ನಲ್ಲಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಸೋಮವಾರ ರಾತ್ರಿ ಘರ್ಷಣೆ ನಡೆದಿದೆ. ಸ್ವಲ್ಪ ಸಮಯದ ನಂತರ, ಶಸ್ತ್ರಸಜ್ಜಿತ ಯುವಕರ ಗುಂಪು ಸರ್ ಸೈಯದ್ ಹಾಲ್ಗೆ ನುಗ್ಗಿದೆ. ಅಲ್ಲಿ ಅವರು ಎದುರಾಳಿ ಗುಂಪಿನ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ಮೂವರು ಯುವಕರು ಗಾಯಗೊಂಡರು ಎಂದು ತಿಳಿಸಿದ್ದಾರೆ.
ಹೊರಗಿನವರು ಹಾಸ್ಟೆಲ್ ಪ್ರವೇಶಿಸಿದ್ದೇಗೆ?:ವಿದ್ಯಾರ್ಥಿಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಹೊರಗಿನಿಂದ 11 ಅಪರಿಚಿತರು ಬಂದಿದ್ದಾರೆ ಎಂದು ತಿಳಿದುಬಂದಿದೆ. ವಿವಿಗೆ ಸಂಬಂಧಿಸದ ಜನರು ರಾತ್ರಿ ವೇಳೆ ಹಾಸ್ಟೆಲ್ಗೆ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ಕೂಡ ಇನ್ನೂ ವಿವರಣೆ ನೀಡಿಲ್ಲ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ 15 ಜನರನ್ನು ಹೆಸರಿಸಲಾಗಿದೆ. ಕೊಲೆ ಯತ್ನ, ಗಲಭೆ ಸೇರಿದಂತೆ ಇನ್ನಿತರ ಆರೋಪದಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.