ರಾಜಮಹೇಂದ್ರವರಂ (ಆಂಧ್ರ ಪ್ರದೇಶ):ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಾರು ಕಾಲುವೆಗೆ ಉರುಳಿದ ಪರಿಣಾಮ ಮೂವರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರುಕೊಂಡ ಮಂಡಲದ ಬುರುಗುಪುಡಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ಈ ಭೀಕರ ಅಪಘಾತ ಸಂಭವಿಸಿದೆ.
ಮೃತ ಮೂವರೂ ಬಿಟೆಕ್ ವಿದ್ಯಾರ್ಥಿಗಳು. ಅತಿವೇಗದ ಕಾರು ಚಾಲನೆ ದುರ್ಘಟನೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರನ್ನು ಹರ್ಷವರ್ಧನ್, ಹೇಮಂತ್ ಮತ್ತು ಉದಯ್ ಕಿರಣ್ ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಉಳಿದ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ "ಏಲೂರು ಪಟ್ಟಣದ ಸಮೀಪದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಬಿಟೆಕ್ ಓದುತ್ತಿರುವ 10 ವಿದ್ಯಾರ್ಥಿಗಳ ತಂಡ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಜಲಪಾತಗಳಿರುವ ಮರೆಡುಮಿಲ್ಲಿ ಬಯೋ ಡೈವರ್ಸಿಟಿ ಹಬ್‌ಗೆ ಪಿಕ್ನಿಕ್‌ಗೆ ತೆರಳಿತ್ತು. ಅವರು ತಮ್ಮ ಭೇಟಿಯನ್ನು ಆನಂದಿಸಿ ಮರಳಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಕಾರು ರಸ್ತೆಯಿಂದ ಜಾರಿ ಬೂರುಗುಪುಡಿ ಗೇಟ್‌ನ ಹಳೆಯ ಮತ್ತು ಹೊಸ ಸೇತುವೆಗಳ ನಡುವಿನ ಕಾಲುವೆಗೆ ಧುಮುಕಿದೆ".
ಘಟನೆಯಲ್ಲಿ ಇನ್ನೂ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ರಾಜಮಹೇಂದ್ರವರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಅಪಘಾತ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿದ್ಯಾರ್ಥಿಗಳು ಎರಡು ಕಾರುಗಳಲ್ಲಿ ತೆರಳಿದ್ದು, ಒಂದು ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.