ಕಾಸ್ಗಂಜ್(ಉತ್ತರ ಪ್ರದೇಶ): ಕಾಸ್ಗಂಜ್ ಜಿಲ್ಲೆಯ ಸದರ್ ಕೊತ್ವಾಲಿ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.
ನಿರ್ಮಾಣ ಹಂತದ ಕಟ್ಟಡವೊಂದು ಏಕಾಏಕಿ ಕುಸಿದ ಕಾರಣ ಈ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಗೊಂಡಿರುವ ಎಲ್ಲರನ್ನೂ ತಕ್ಷಣವೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಉದ್ಯಮಿ ರಾಜೀವ್ ಬಿರ್ಲಾ ಅವರಿಗೆ ಸೇರಿದ ಕಟ್ಟಡ ಇದಾಗಿದ್ದು, ದುರ್ಘಟನೆಯಲ್ಲಿ ಅವರ ಸಹೋದರ ಕುಲದೀಪ್ ಬಿರ್ಲಾ ಸಹ ಮೃತಪಟ್ಟಿದ್ದಾರೆ. ಜಿಲ್ಲಾಡಳಿತಕ್ಕೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ರವಾನಿಸಿ, ಅವಶೇಷಗಳಡಿ ಸಿಲುಕ್ಕಿದ್ದ 12 ಜನರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಕುಲದೀಪ್ ಬಿರ್ಲಾ ಹಾಗೂ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಜೆಸಿಬಿ ಯಂತ್ರದ ಮೂಲಕ ಸಿಲುಕಿಕೊಂಡಿರುವ ಕಾರ್ಮಿಕರ ಹುಡುಕಾಟ ಕಾರ್ಯ ಮುಂದುವರೆದಿದ್ದು, ಸ್ಥಳದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಉನ್ನತ ಅಧಿಕಾರಿಗಳು ಹಾಜರಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಹಾರ ಹಾಗೂ ರಕ್ಷಣಾ ಕಾರ್ಯ ತ್ವರಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದೆ.