ಪೂಂಚ್ (ಜಮ್ಮು ಮತ್ತು ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಸ್ಥಳದ ಬಳಿ ಶುಕ್ರವಾರ ಅನುಮಾನಾಸ್ಪವಾಗಿ ಮೂವರ ಶವಗಳು ಪತ್ತೆಯಾಗಿವೆ. ಗುರುವಾರ ಸುರನ್‌ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೆ, ಇಬ್ಬರು ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಫ್ಲಿಯಾಜ್‌ನ ಟೋಪಾ ಪೀರ್ ಗ್ರಾಮದ ಎಲ್ಲಾ ನಿವಾಸಿಗಳಾದ ಸಫೀರ್ ಹುಸೇನ್ (43), ಮೊಹಮ್ಮದ್ ಶೋಕೆಟ್ (27) ಮತ್ತು ಶಬೀರ್ ಅಹ್ಮದ್ (32) ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ ಬಗ್ಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಮಾಹಿತಿ ತಿಳಿದು, ಪೂಂಚ್ ಡೆಪ್ಯುಟಿ ಕಮಿಷನರ್ ಚೌಧರಿ ಮೊಹಮ್ಮದ್ ಯಾಸಿನ್ ಮತ್ತು ಹಿರಿಯ ಪೊಲೀಸ್ ಅಧೀಕ್ಷಕ ವಿನಯ್ ಕುಮಾರ್ ಅವರು ಬುಫ್ಲಿಯಾಜ್ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಇಂಟರ್ನೆಟ್ ಸೇವೆ ಸ್ಥಗಿತ:ಭಯೋತ್ಪಾದಕರ ಪತ್ತೆಗೆ ದಟ್ಟ ಅರಣ್ಯದಲ್ಲಿ ಭಾರಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅಲ್ಲದೆ, ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಶನಿವಾರ ಮುಂಜಾನೆಯಿಂದಲೇ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ವದಂತಿ ಹರಡುವಿಕೆ ತಡೆಗೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರರಿಂದ ನಾಲ್ವರು ಶಸ್ತ್ರಸಜ್ಜಿತ ಭಯೋತ್ಪಾದಕರು ಗುರುವಾರ ಮಧ್ಯಾಹ್ನ ಸೇನೆಯ ಜಿಪ್ ಮತ್ತು ಟ್ರಕ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಐವರು ಸೈನಿಕರನ್ನು ಹುತಾತ್ಮರಾಗಿದ್ದರು. ದಾಳಿಯ ಬಳಿಕ, ಭಯೋತ್ಪಾದಕರು ಇಬ್ಬರು ಸೈನಿಕರ ಪಾರ್ಥಿವ ಶರೀರವನ್ನು ವಿರೂಪಗೊಳಿಸಿದ್ದಲ್ಲದೆ, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಲೆಫ್ಟಿನೆಂಟ್ ಜನರಲ್ ಸಂದೀಪ್ ಜೈನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಸೇನೆ ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿದ್ದಾರೆ.
ಜೊತೆಗೆ ಡಿಜಿಪಿ, ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಪೂಂಚ್‌ಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಹೆಲಿಕಾಪ್ಟರ್‌ಗಳ ಸಹಾಯದಿಂದ ವೈಮಾನಿಕ ಮೇಲ್ವಿಚಾರಣೆಯನ್ನು ಸಹ ನಡೆಸಲಾಗುತ್ತಿದೆ ಮತ್ತು ಭಯೋತ್ಪಾದಕರ ಪತ್ತೆಗೆ ಸ್ನಿಫರ್ ಡಾಗ್‌ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
''ರಜೌರಿ-ಪೂಂಚ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಘಟನೆಗಳು ಕಳವಳಕಾರಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಘಟನೆ. ಇತ್ತೀಚಿನವರೆಗೂ ಈ ಪ್ರದೇಶವು ಶಾಂತಿಯುತವಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಇಲ್ಲಿ 35 ಸೈನಿಕರು ಮೃತಪಟ್ಟಿದ್ದಾರೆ. ಇದು ಏಕೆ ನಡೆಯುತ್ತಿದೆ? ಏಕೆ ಭಯೋತ್ಪಾದಕರು ಈ ರೀತಿಯ ದಾಳಿ ಮಾಡಿದ್ದಾರೆ?" ಎಂದು ರಕ್ಷಣಾ ತಜ್ಞ ಕರ್ನಲ್ ಎಸ್ ಎಸ್ ಪಠಾನಿಯಾ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಮ ಮಂದಿರ ಉದ್ಘಾಟನೆ ವಿಚಾರ ನನಗೆ ಸಂತಸ ತಂದಿದೆ; ಆದರೆ..: ಫಾರೂಕ್ ಅಬ್ದುಲ್ಲಾ